ಹಿರೀಸಾವೆ : ಹೋಬಳಿಯಾದ್ಯಂತ ಬುಧವಾರ ವ್ಯಾಪಕವಾಗಿ ಮಳೆ ಸುರಿದಿದ್ದು, ಚರಂಡಿಗಳು ತುಂಬಿ ರಸ್ತೆ ಮೇಲೆಯೇ ನೀರು ಹರಿಯಿತು.
ಬೆಳಗ್ಗೆಯಿಂದ ಬಿಸಿಲಿನ ತಾಪದ ಜತೆಗೆ ಸೆಖೆಯೂ ಜೋರಾಗಿತ್ತು. ಮಧ್ಯಾಹ್ನ 3.30 ರ ಸುಮಾರು ಶುರುವಾದ ಮಳೆ ಯಾವುದೇ ಮಿಂಚು, ಗುಡುಗು ಹಾಗೂ ಗಾಳಿಯ ಅಬ್ಬರವಿಲ್ಲದೆ ಒಂದೇ ಸಮನೆ 4.15 ರವರೆಗೆ ಧಾರಾಕಾರವಾಗಿ ಸುರಿಯಿತು.
ಕೆಲವೆಡೆ ಸಾಧಾರಣವಾಗಿ ಜಿಟಿಜಿಟಿ ಮಳೆ ಹಿಡಿದರೆ, ದಿಡಗ, ಜಿನ್ನೇನಹಳ್ಳಿ, ಬೆಳಗೀಹಳ್ಳಿ, ಸೋಸಲಗೆರೆ ಸೇರಿದಂತೆ ಬಹುತೇಕ ಕಡೆ ಉತ್ತಮವಾಗಿ ಸುರಿಯಿತು. ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯಿತು. ಸಂಜೆ 4.15 ರ ನಂತರವೂ ಬಹುತೇಕ ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರೆಯಿತು.
ಕಳೆದ 20-25 ದಿನಗಳಿಂದ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ತೆಂಗಿನ ಮರಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ರಾಗಿ ಬೆಳೆಯು ಈಗಾಗಲೇ ಫಸಲು ಹಿಡಿದಿದ್ದು, ತೇವಾಂಶ ಹೆಚ್ಚಿರುವುದರ ಜತೆಗೆ ಕೆಲವೊಮ್ಮೆ ಗಾಳಿ ಬೀಸಿದ ಕಾರಣ ತೆನೆಯೊಂದಿಗೆ ನೆಲಕ್ಕುರುಳಿ ಬಿದ್ದಿದೆ.
ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎನ್ನದೆ ದಿನದಲ್ಲಿ ಮೂರ‌್ನಾಲ್ಕು ಬಾರಿ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತರು ಜಾನುವಾರುಗಳನ್ನು ಮೇವಿಗೆ ಬಿಡಲು ಸಾಧ್ಯವಾಗದೆ ಕೊಟ್ಟಿಗೆಯಲ್ಲಿಯೇ ಕಟ್ಟಿ ನೀರು ಹಾಗೂ ಮೇವು ಒದಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಬಾಳಗಂಚಿ ಕೆರೆಯು 25 ವರ್ಷಗಳ ಬಳಿಕ ಮಳೆ ನೀರಿನಿಂದ ತುಂಬಿ ಕೋಡಿ ಬಿದ್ದಿದೆ. ಅಲ್ಲದೆ ಹಳ್ಳಕೊಳ್ಳಗಳಲ್ಲಿ ಮಳೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಕೆರೆ-ಕಟ್ಟೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.
ಕೆಲವೆಡೆ ಸಂಜೆ 4.30ರ ನಂತರವೂ ಜಿಟಿಜಿಟಿ ಮಳೆ ಮುಂದುವರಿದ ಪರಿಣಾಮ ರೈತರು ಜಾನುವಾರುಗಳಿಂದ ಹಾಲು ಕರೆದು ಡೇರಿಗಳಿಗೆ ಕೊಂಡೊಯ್ಯಲು ಪರದಾಡುವಂತಾಯಿತು.