ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು  
ಜಿಲ್ಲೆ

ಗ್ರಾಮೀಣ ಮಕ್ಕಳ ಭರವಸೆಯ ಕಿರಣ, ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುತ್ತಿರುವ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ.

1971ರಲ್ಲಿ ಸ್ಥಾಪನೆಯಾದ ಉನ್ನತ ಇತಿಹಾಸವುಳ್ಳ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭರವಸೆಯ ಆಶಾಕಿರಣ. ಸುದೀರ್ಘ ಶೈಕ್ಷಣಿಕ ಅನುಭವ ಹೊಂದಿರುವ ಜಿಎಸ್‌ವಿಎಸ್ ಅಸೋಸಿಯೇಷನ್ ಆಡಳಿತಕ್ಕೆ ಒಳಪಟ್ಟಿರುವ ಸರಸ್ವತಿ ವಿದ್ಯಾಲಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಅವಕಾಶ ಒದಗಿಸುತ್ತಾ ಬಂದಿದೆ. ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆದ ಕೀರ್ತಿ ಹೊಂದಿದ ಸರಸ್ವತಿ ವಿದ್ಯಾಲಯ ಹಲವು ವರ್ಷಗಳಿಂದ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ದಾಖಲಿಸುತ್ತಿದೆ. ಪ್ರತಿ ವರ್ಷ ಮೊದಲ ಹತ್ತು ರ‌್ಯಾಂಕ್‌ಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜು ಶೇ.99.35 ಫಲಿತಾಂಶ ದಾಖಲಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪಿಯುಸಿ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿಯ ಅಂಕವನ್ನು ಮಾನದಂಡವಾಗಿ ಪರಿಗಣಿಸುತ್ತಿಲ್ಲ.

ಪ್ರತಿ ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್

ಪ್ರತಿ ತರಗತಿಗಳಲ್ಲೂ ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಂಡಿರುವ ಕಾಲೇಜು ಆ ಮೂಲಕ ಮಕ್ಕಳಿಗೆ ಆಧುನಿಕ ಮಾದರಿ ಶಿಕ್ಷಣ ನೀಡುತ್ತಿದೆ. ವಿಶೇಷವಾಗಿ ನವೀಕರಿಸಲಾಗಿರುವ ಅತ್ಯುತ್ತಮ ಗುಣಮಟ್ಟದ ಜೀವಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನ ಪ್ರಯೋಗಾಲಯ ಹೊಂದಿದ್ದು, ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಶ್ರೇಯಸ್ಸಿಗೆ ಪಾತ್ರವಾಗಿದೆ. ಅನುಭವಿ ಮತ್ತು ನುರಿತ ಸಮರ್ಪಣಾ ಮನೋಭಾವದ ಉಪನ್ಯಾಸಕ ವೃಂದ ಉತ್ತಮ ಫಲಿತಾಂಶದ ಜತೆಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾಳಜಿ ವಹಿಸುತ್ತಿರುವುದು ಕಾಲೇಜಿನ ಹೆಗ್ಗಳಿಕೆ.

ಸಿಇಟಿ, ನೀಟ್ ತರಬೇತಿ

ಉತ್ತಮ ಗ್ರಂಥಾಲಯ ಸೌಲಭ್ಯ ಹೊಂದಿರುವ ಈ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ತರಬೇತಿ ನೀಡುತ್ತಿದೆ. ಕ್ರೀಡೆಗಳು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಉತ್ತಮ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಹೊಂದಿದೆ. ಎನ್ನೆಸ್ಸೆಸ್ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ ಸೇವಾ ಮನೋಭಾವ ಬೆಳೆಸಲಾಗುತ್ತಿದೆ. ಕಾಲೇಜಿನ ಸಾಹಿತ್ಯ ಪ್ರತಿಭೆಗಳಿಗಾಗಿ ವಾರ್ಷಿಕ ವಿಶೇಷಾಂಕ ‘ದೃಷ್ಟಿ’ಯನ್ನು ಹೊರತರಲಾಗುತ್ತಿದೆ. ಸಾಹಿತ್ಯ ಸಂಘವೂ ಇದೆ. ಯಕ್ಷಗಾನ ತರಬೇತಿ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳಿಗೆ ಸುಮಾರು 8 ಲಕ್ಷ ರೂ. ಗಳಿಗೂ ಮಿಕ್ಕಿ ವಿದ್ಯಾರ್ಥಿವೇತನ ಹಾಗೂ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ ಒದಗಿಸಲಾಗುತ್ತಿದೆ. ಹುಡುಗರ ಹಾಸ್ಟೆಲ್ ಮತ್ತು ಶಾಲಾ ಬಸ್ ಸೌಲಭ್ಯ ಕೂಡ ಕಲ್ಪಿಸಲಾಗಿದೆ.

ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ ಮತ್ತು ಪಿಸಿಎಂಬಿ ವಾಣಿಜ್ಯ ವಿಭಾಗದಲ್ಲಿ ಎಚ್‌ಇಬಿಎ, ಇಬಿಎಸಿ ಮತ್ತು ಇಬಿಎಎಸ್ ಕೋರ್ಸ್‌ಗಳು ಇಲ್ಲಿ ಲಭ್ಯವಿದೆ. ದ್ವಿತೀಯ ಭಾಷೆಯಾಗಿ ಕನ್ನಡ, ಹಿಂದಿ ಅಥವಾ ಸಂಸ್ಕೃತ ಕಲಿಕೆಗೆ ಅವಕಾಶವಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯುತ್ತಿರುವ ಈ ವಿದ್ಯಾ ಸಂಸ್ಥೆಯ ಪ್ರಯೋಜನವನ್ನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿ ಎನ್ನುವುದು ಆಶಯ. ಹೆಚ್ಚಿನ ಮಾಹಿತಿಗೆ ದೂರವಾಣಿ-08254-265043 ಅಥವಾ 9480524651 ಸಂಪರ್ಕಿಸಬಹುದು.