ಜಿಲ್ಲೆ

ಉತ್ತಮ ಕವಿತೆ ಸಿಗೋದು ನೆಟ್‌ವರ್ಕ್ ಇಲ್ಲದ ಕಡೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಉತ್ತಮ ಕವಿತೆ ಎಲ್ಲಿ ಸಿಗುತ್ತದೆ? ನೆಟ್‌ವರ್ಕ್ ಇಲ್ಲದ ಕಡೆ ಒಳ್ಳೆಯ ಕವಿತೆ ಹಾಗೂ ಪ್ರೀತಿ ಎರಡೂ ಸಿಗುತ್ತದೆ…


ಕಲಾಮಂದಿರದಲ್ಲಿ ಮಂಗಳವಾರ ಮೈಸೂರು ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕವಿ ಜಯಂತ್ ಕಾಯ್ಕಿಣಿ ಅವರ ಸೂಚ್ಯ ನುಡಿಯಿದು. ಮೊಬೈಲ್ ಗೀಳು ಮನುಷ್ಯನ ಅಭಿರುಚಿಯನ್ನೇ ಕಿತ್ತುಕೊಳ್ಳುತ್ತಿದೆ. ಇದಕ್ಕೆ ಸಾಹಿತಿಗಳೂ ಹೊರತಲ್ಲ. ಇದರಿಂದ ಹೊರಬಂದಾಗ ಉತ್ತಮ ಸಾಹಿತ್ಯ ಕೃಷಿ ಸಾಧ್ಯ ಎಂದ ಅವರು, ಜಾಗತಿಕ ಯುಗದಲ್ಲಿ ಮೊಬೈಲ್ ಆವರಿಸಿಕೊಂಡಿರುವ ಪರಿಯನ್ನು ವಿಸ್ತಾರವಾಗಿ ತೆರೆದಿಟ್ಟರು.


ಇದೀಗ ಸಾಮಾಜಿಕ ಜಾಲತಾಣದಲ್ಲಿ ಗುಡ್‌ನೈಟ್, ಗುಡ್ ಮಾರ್ನಿಂಗ್ ಸಾಹಿತಿಗಳ ಸಂಖ್ಯೆ ಹೆಚ್ಚು. ಅದೇ ವೇದಿಕೆಯಲ್ಲೇ ಪ್ರತಿಕ್ರಿಯೆ ಕೊಡುತ್ತಾರೆ. ಎದುರಿಗೆ ಸಿಕ್ಕಾಗ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಇದು ಕೃತಕ ಬದುಕು. ನೈಜ ಜೀವನಾನುಭವವೇ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಕಾವ್ಯ ಕನ್ನಡಿಯಲ್ಲ. ಮಾನವೀಯ ಕಿಡಿ, ಬರವಣಿಗೆಯ ಕಿಡಿಯೂ ಹೌದು. ಸಾಹಿತ್ಯದ ಆಧ್ಯಾತ್ಮಿಕ ದರ್ಶನ ಹಿಮಾಲಯದಲ್ಲಿ ಆಗಲ್ಲ. ಅದು ಜನರ ನಡುವೆ ಆಗುವಂತಹದ್ದು ಎಂದರು.


ಓದುಗರಿಗಿಂತ ಕವಿಗಳ ಸಂಖ್ಯೆ ಹೆಚ್ಚು. ಕವಿಗಳಿಗಿಂತ ಪ್ರಶಸ್ತಿಗಳ ಸಂಖ್ಯೆ ಹೆಚ್ಚು. ಪ್ರಶಸ್ತಿಗಳಿಂದ ಕವಿಯನ್ನು ಅಳೆಯಲಾಗುತ್ತಿದೆ. ಕೃತಿಗಳು, ಬರವಣಿಗೆಯಿಂದಲ್ಲ. ಕವಿತೆಗೆ ಮಾನವೀಯ ಆಯಾಮವಿದೆ. ಅದು ಮನುಷ್ಯ ವಿಕಾಸಕ್ಕೆ ಜ್ಞಾನವಾಗಬೇಕು. ಮಾನವೀಯತೆ ವಿಕಾಸಕ್ಕೂ ಕಾವ್ಯವೇ ವೇದಿಕೆ ಆಗಬೇಕು.

ಸಾಹಿತ್ಯ ಮಾರ್ಗದಲ್ಲಿ ಬದುಕಿನ ಕುರಿತು ಹೊಸತನ್ನು ಹುಡುಕುವುದು ಹಾಗೂ ವಿಕಾಸದ ಅನ್ವೇಷಣೆ ಮುಖ್ಯ. ಇದಕ್ಕೆ ಸಾಹಿತ್ಯ ಮೂಲಾಧಾರ. ಪ್ರಶಸ್ತಿಗಳ ಆಸೆಗಾಗಿ ಕವಿತೆ, ಸಾಹಿತ್ಯ ಬರೆಯುವುದಲ್ಲ. ಕವಿತೆ, ಕಥೆ, ಕಾದಂಬರಿ ಬರೆದರೆ ಸಾಹಿತಿಗೆ ಏನು ಸಿಗುತ್ತದೆ? ಅದನ್ನು ಬರೆಯುವಾಗಲೇ ಸಿಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದರು.

ಪಂಪ, ಕುಮಾರವ್ಯಾಸ ಅವರಂತಹ ಸಾಹಿತ್ಯ ಓದಬೇಕಿಲ್ಲ. ನವ ಸಾಹಿತ್ಯವನ್ನೂ ಹೊಸ ತಲೆಮಾರಿನವರು ಓದುತ್ತಿಲ್ಲ. ಓದದಿದ್ದರೆ ಬರೆಯಲು ಆಗಲ್ಲ. ಬರವಣಿಗೆ ವಿವೇಕ. ಅದುವೇ ಪ್ರಜ್ಞಾ ಪ್ರವಾಹ ಸಂಪರ್ಕ ಜಾಲ. ಭಾಷೆ ಪದ್ಯಕ್ಕೆ ಸಿಮೀತವಲ್ಲ. ಅದು ಜನರ ನಡುವೆ ಸಮತೆ, ಮಮತೆಗೆ ಸಂಬಂಧಿಸಿದ್ದು ಎಂದು ನುಡಿದರು.

ಅಕ್ಷರ ಕೃಷಿ ಮಾಡಬೇಕು


ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಸಂವಿಧಾನ ಸಮರ್ಥನೆ ಮಾಡುವ ಕೆಲಸವನ್ನು ಪ್ರತಿಯೊಬ್ಬ ಸಾಹಿತಿಯೂ ಮಾಡಬೇಕು. ಸಂವಿಧಾನ ಪೀಠಿಕೆಯಲ್ಲಿ ‘ನಾವು ಭಾರತೀಯರು’ ಎಂಬ ನಿಲವನ್ನು ಬೆಂಬಲಿಸಬೇಕು. ಇದರಲ್ಲಿ ಹಿಂದು, ಮುಸ್ಲಿಂ ಎಂದಿಲ್ಲ ಎಂದು ಹೇಳಿದರು.

ಸಮಾಜಕ್ಕೂ ನನಗೂ ಸಂಬಂಧವಿಲ್ಲ ಎನ್ನುವಂತೆ ಸಾಹಿತ್ಯಗಳು ಪ್ರತ್ಯೇಕವಾಗಿ ಇರಬಾರದು. ಸಮಾಜದ ಎಲ್ಲ ಜವಾಬ್ದಾರಿಯೂ ಸಾಹಿತಿಯ ಜವಾಬ್ದಾರಿಯೂ ಹೌದು. ಅವುಗಳಿಗೆ ಸ್ಪಂದಿಸಿ ಅಕ್ಷರ ಕೃಷಿ ಮಾಡಬೇಕು. ಸಮಾಜದ ಕೆಳಸ್ತರದ ಸಾಮಾನ್ಯ ಜನರ ಕುರಿತು ಕವಿ ಮಾತನಾಡಬೇಕು ಎಂದು ಹೇಳಿದರು.

ಖಂಡಿಸುವ ಗುಂಡಿಗೆ ಸಾಹಿತಿಗಳಿಗಿಲ್ಲವೇ?


ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ರಾಜಕಾರಣಿಗಳ ಆರೋಪ-ಪ್ರತ್ಯಾರೋಪದ ನಡುವೆ ಕನ್ನಡ ಭಾಷೆಯ ಕೊಲೆಯಾಗುತ್ತಿದೆ. ಇದನ್ನು ಖಂಡಿಸುವ ಗುಂಡಿಗೆ ಸಾಹಿತಿಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

ಜನತಂತ್ರ ಜೀವಾಳವಾದ ರಾಜಕೀಯ ಕುರಿತು ಸಾಹಿತ್ಯ ಬರಬೇಕು. ಈಗಲೂ ರಾಜಕೀಯ ಕ್ಷೇತ್ರವನ್ನು ಮೈಲಿಗೆ, ಅಸ್ಪಶ್ಯರಂತೆ ಕಾಣಲಾಗುತ್ತಿದೆ. ಈ ಮನಸ್ಥಿತಿ ಬದಲಾಗಬೇಕು. ಕವಿಗೋಷ್ಠಿಯನ್ನು ಹೀಗೆ ಮಾಡುವುದಲ್ಲ. ಎಲ್ಲರನ್ನೂ ಒಳಗೊಳ್ಳಬೇಕು. ಆಡಂಬರ ಬೇಡ. ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ಕಿಡಿಕಾರಿದರು.

ಬೆಳಕಿನ ಭರವಸೆ ತೋರಿಸುವುದೇ ಕವಿತೆ


ಯುದ್ಧ ಸಂತ್ರಸ್ತರಾದ ಯೂಕ್ರೇನ್, ಪ್ಯಾಲೆಸ್ತೈನ್ ಕುರಿತು ಕವಯಿತ್ರಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ತಾಯಿ ಗುಣ, ಸಂತೈಸುವ ಗುಣ ಕವಿತೆಗೆ ಇದೆ. ಓದುಗರಿಗೆ ಕವಿತೆಯೇ ತಾಯಿ. ಕಷ್ಟ-ಸಂಕಷ್ಟದಲ್ಲಿ ಸಿಲುಕಿಕೊಂಡವರಿಗೆ ಕತ್ತಲೆಯಿಂದ ಬೆಳಕಿನ ಭರವಸೆ ತೋರಿಸುವುದೇ ಕವಿತೆ ಎಂದು ವಿಶ್ಲೇಷಿಸಿದರು.

ಸಂವೇದನಾಶೀಲತೆಯೊಂದಿಗೆ ಭಾಷಾ ನಿರೂಪಣೆಯಲ್ಲಿ ನೈಪುಣ್ಯತೆ, ನಿತ್ಯ ಓದು ಇರಬೇಕು ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ಮರ್ಯಾದೆಗೇಡು ಹತ್ಯೆ ವಿರುದ್ಧ ಕಿಡಿ


ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮರ್ಯಾದೆಗೇಡು ಹತ್ಯೆ ಇಡೀ ಮಾನವ ಕುಲ ತಲೆತಗ್ಗಿಸುವಂಥದ್ದು. ಇಂತಹ ಅನಿಷ್ಟ ಪದ್ಧತಿಗಳನ್ನು ಸಾಹಿತ್ಯದ ಮೂಲಕ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕು. ಮನುಷ್ಯರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷೆ ಡಾ.ವಿಜಯಕುಮಾರಿ ಎಸ್.ಕರಿಕಲ್, ಕಾರ್ಯದರ್ಶಿ ಎಂ.ಎಸ್.ಗಿರಿಧರ್ ಉಪಸ್ಥಿತರಿದ್ದರು.

ಚುಟುಕು ಗೋಷ್ಠಿ ಹಾಸ್ಯದ ಹೊನಲು


ಹಾಸ್ಯ- ಚುಟುಕು ಕವಿಗೋಷ್ಠಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿತು. ಸಾಹಿತಿ ಬಸವರಾಜ ಸಾದರ ಅಧ್ಯಕ್ಷತೆಯಲ್ಲಿ ಕವಿಗಳಾದ ಅಸಾದುಲ್ಲಾ ಬೇಗ್, ಎಲ್.ಎಸ್.ಶಾಸ್ತ್ರಿ, ಇಂದಿರಾ ಎಚ್.ಪಾಟೀಲ, ಹೊ.ಮ.ಪಂಡಿತಾರಾಧ್ಯ, ಜೆ.ನರಸಿಂಹಮೂರ್ತಿ, ಮ.ಗು.ಬಸವಣ್ಣ, ನಾ.ನಾಗಚಂದ್ರ, ಮಹಿಪಾಲರೆಡ್ಡಿ, ಮುನ್ನೂರ್, ಪ್ರೇಮಾ ಮಂಜುನಾಥ್, ಗೀತಾಮಂಜು, ಎಸ್.ಪ್ರವೀಣ್‌ಕುಮಾರ್, ಪ್ರಕಾಶ್ ನಾಡಿಗ, ಖುಷ್ವಂತ್ ಕೋಳಿಬೈಲು ಕವನ ವಾಚಿಸಿದರು. ಕವಿ ಕೆ.ಸಿ.ಶಿವಪ್ಪ ಪಾಲ್ಗೊಂಡಿದ್ದರು.