ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮೀನುಗಾರಿಕೆ ಪ್ರಮಾಣ ಹೆಚ್ಚಾಗಿದೆ. ಈ ಹಿಂದೆ ಕೇವಲ 3ರಿಂದ 4 ಟನ್‌ಗೆ ಸೀಮಿತವಾಗಿದ್ದ ಮೀನುಗಳ ಸಾಕಣೆ ಪ್ರಮಾಣ, ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 9 ಸಾವಿರ ಟನ್ ಮೀನು ಉತ್ಪಾದನೆಯಾಗಿದೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.
ಕೆರೆಗಳನ್ನು ನೆಚ್ಚಿಕೊಂಡಿರುವ ಈ ಭಾಗದಲ್ಲಿ ಮೀನುಗಾರಿಕೆಯು ಒಳ್ಳೆಯ ಉದ್ಯಮ. ಪ್ರತಿ ವರ್ಷ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು, ನಿಗದಿತ ಗುರಿ ಸಾಧನೆಯನ್ನು ತೋರಲಾಗುತ್ತಿದೆ. ಈ ಭಾಗದಲ್ಲಿ 11,300 ಮಂದಿ ಮೀನು ಸಾಕಣೆದಾರರು ಮತ್ತು 4 ಮೀನುಗಾರರ ಸಹಕಾರ ಸಂಗಳು ಕಾರ್ಯ ನಿರ್ವಹಿಸುತ್ತಿದ್ದು, 606 ಮಂದಿ ಸದಸ್ಯರಿದ್ದಾರೆ. ಇಲ್ಲಿನ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 214 ಕೆರೆಗಳಿದ್ದು 20,808 ಜಲ ವಿಸ್ತೀರ್ಣ ಹೊಂದಿದೆ. ಕೆರೆಗಳಲ್ಲಿ 80 ಲಕ್ಷ ಮೀನು ಮರಿಗಳನ್ನು ವಿಲೇವಾರಿ ವಾಡಲಾಗಿದೆ. ಇದರ ನಡುವೆ ಈ ಬಾರಿ ವಾರ್ಷಿಕ 729 ಮಿ.ಮೀ ವಾಡಿಕೆ ಮಳೆ ಪೈಕಿ 1023 ಮಿ.ಮೀ ಮಳೆ ಬಿದ್ದಿದೆ. ಇದು ಮೀನು ಉತ್ಪಾದನೆ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದು, 9 ಸಾವಿರ ಟನ್ ಉತ್ಪಾದನೆಯ ಮೂಲಕ ದಾಖಲೆ ಪ್ರವಾಣದ ಗುರಿ ಸಾಧನೆ ಮಾಡಲಾಗಿದೆ.
ಈ ಹಿಂದೆ ನಿರೀಕ್ಷೆಗೆ ಅನುಗುಣವಾಗಿ ಮಳೆ ಬೀಳದೇ ಮೀನುಗಾರಿಕೆಯು ಆರಕ್ಕೇರದ, ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿತ್ತು. ದೊಡ್ಡ ಕೆರೆಗಳನ್ನು ಹೊರತುಪಡಿಸಿ ಸಣ್ಣ ಕೆರೆಗಳಲ್ಲಿ ಅಷ್ಟಾಗಿ ಲಾಭ ಸಿಕ್ಕಿರಲಿಲ್ಲ. ಆದರೆ, ಒಳ್ಳೆಯ ಲಾಭದ ನಿರೀಕ್ಷೆ ಖಾತ್ರಿಯಾಗಿದೆ.
ಈಗಾಗಲೇ ಕೆರೆಗಳು ಕೋಡಿ ತುಂಬಿ ನೀರು ಹರಿಯುತ್ತಿರುವುದರಿಂದ ಕಂದವಾರ ಕೆರೆ, ಜಕ್ಕಲಮಡು ಜಲಾಶಯ, ಅಮಾನಿ ಭೈರಸಾಗರ, ವಾಟದಹೊಸಹಳ್ಳಿ ಕೆರೆ ಸೇರಿ ಹಲವೆಡೆ ಬಲೆಗಳನ್ನು ಹಾಕಿ, ನೀರಿನಲ್ಲಿ ಮೀನು ಹಿಡಿಯುತ್ತಿದ್ದು, ದೊಡ್ಡ ದೊಡ್ಡ ಗಾತ್ರದ ಮೀನುಗಳು ಸಿಗುತ್ತಿವೆ. ತಾಜಾ ಮಾoಸದ ಲೆಕ್ಕಾಚಾರದಲ್ಲಿ ಸುತ್ತಲಿನ ಜನರು ಕೆರೆಗಳ ಬಳಿ ತೆರಳಿ, ದುಬಾರಿ ಬೆಲೆ ತೆತ್ತು ಮೀನು ಖರೀದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇಲಾಖೆಯಿಂದ 214 ಕೆರೆಗಳಲ್ಲಿ ಮೀನು ಸಾಕಣೆ ಚಟುವಟಿಕೆ ನಡೆಯುತ್ತಿದೆ. ಇದರ ನಡುವೆ ಹಿಂದೆ 3 ರಿಂದ 4 ಟನ್‌ಗೆ ಸೀಮಿತವಾಗಿದ್ದ ಸಂದರ್ಭದಲ್ಲಿ ಈ ಬಾರಿ 9 ಟನ್ ಮೀನು ಉತ್ಪಾದನೆಯಾಗಿರುವುದು ಖುಷಿಯ ವಿಚಾರ. ಯಶಸ್ವಿನಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ