ಜಿಲ್ಲೆ

ಹಿರಿಯ ನಾಗರಿಕರಿಗೆ ಪೊಲೀಸ್ ಆಯುಕ್ತರಿಂದ ಗುಡ್​ ನ್ಯೂಸ್​

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 20 ಲಕ್ಷ ಹಿರಿಯ ನಾಗರಿಕರಿದ್ದು, ಅವರ ರಕ್ಷಣೆ ನಮ್ಮ ಮುಖ್ಯ ಉದ್ದೇಶವಾಗಿದೆ. ಹಿರಿಯ ನಾಗರಿಕರ ರಕ್ಷಣೆಯ ವಿಚಾರದಲ್ಲಿ ನಗರ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ‘ವರ್ಲ್ಡ್ ಎಲ್ಡರ್ ಅಬ್ಯೂಸ್ ಅವೇರ್​ನೆಸ್ ಡೇ-2020’ ಸಮಾರಂಭ ಉದ್ಘಾಟಿಸಿ ‘ಬೆಂಗಳೂರು ಎಲ್ಡರ್​ಲೀ ಪ್ರೊಟೆಕ್ಷನ್ ಪ್ರಾಜೆಕ್ಟ್’ ಸಹಾಯವಾಣಿ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯ ನಾಗರಿಕರ ಸಹಾಯವಾಣಿಯು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿದ್ದು, ಹಿರಿಯರಿಗೆ ಸಹಕಾರಿಯಾಗಿದೆ. ಹಿಂಸೆ ಅನುಭವಿಸುತ್ತಿರುವ ಹಿರಿಯ ನಾಗರಿಕರು ಬೆಂಗಳೂರು ಎಲ್ಡರ್​ಲೀ ಪ್ರೊಟೆಕ್ಷನ್ ಪ್ರಾಜೆಕ್ಟ್ ಆಪ್ ಮೂಲಕ ದೂರು ದಾಖಲಿಸಬಹುದು. ಅಲ್ಲದೆ, 1090 ಉಚಿತ ಸಹಾಯವಾಣಿ ನಂಬರ್​ಗೆ ಕರೆ ಮಾಡಿಯೂ ದೂರು ದಾಖಲಿಸಲು ಅವಕಾಶಗವಿದೆ. ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರಿಗಾಗಿ ಸೆಮಿನಾರ್​ಗಳನ್ನು ಆಯೋಜಿಸಿ ಪೊಲೀಸ್ ಠಾಣಾ ಮಟ್ಟದಲ್ಲಿ ಅವರ ರಕ್ಷಣೆಯನ್ನು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಬೆಂಗಳೂರು ಪೊಲೀಸರಿಗೆ ಹಿರಿಯರಿಂದ ಸಾಲು-ಸಾಲು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಆಪ್ ರೂಪಿಸಲಾಗಿದೆ. ಹಿರಿಯರು ಒಂಟಿಯಾಗಿದ್ದರೆ ಅವರ ಬಗ್ಗೆ ಗಸ್ತು ಪೊಲೀಸರು ನಿಗಾ ವಹಿಸಬೇಕು. ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. ಪಿಂಚಣಿ ದೊರಕಿಸಲು ಅವರಿಗೆ ನೆರವಾಗಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಭಾಸ್ಕರ್​ರಾವ್ ಕಿವಿಮಾತು ಹೇಳಿದರು.

ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್್ಸ, ಕಮಾಂಡ್ ಸೆಂಟರ್​ನ ಡಿಸಿಪಿ ಇಶಾ ಪಂತ್, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಮತ್ತಿತರರು ಉಪಸ್ಥಿತರಿದ್ದರು.

ಮಹಾನಗರದಲ್ಲಿನ ಹಿರಿಯ ನಾಗರಿಕರಿಗೆ ರಕ್ಷಣೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಬಲ ಕಡಿಮೆ ಯಿದ್ದರೂ ಹಿರಿಯ ನಾಗರಿಕರ ರಕ್ಷಣೆಯ ವಿಚಾರದಲ್ಲಿ ಬೇರೆ ನಗರಗಳಿಗಿಂತ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ