ಹನೂರು: ತಾಲೂಕಿನಾದ್ಯಂತ ಬುಧವಾರ ಎಡಬಿಡದೇ ಇಡೀ ದಿನ ಜೋರು ಹಾಗೂ ತುಂತುರು ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು ಒಂದೆಡೆಯಾದರೆ, ಹಳ್ಳಕೊಳ್ಳಗಳಲ್ಲಿ ನೀರು ಹರಿದು ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.
ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶವಾಗಿರುವ ಹಿನ್ನೆಲೆ ಕಳೆದ 2 ದಿನಗಳಿಂದ ಹನೂರು ಭಾಗದ ಬಹುತೇಕ ಕಡೆಗಳಲ್ಲಿ ಜೋರು ಮಳೆಯಾಗಿತ್ತು. ಜತೆಗೆ ಮಂಗಳವಾರ ತಡರಾತ್ರಿಯಿಂದ ಆರಂಭವಾದ ಮಳೆ ಬುಧವಾರ ರಾತ್ರಿವರೆಗೆ ಎಡಬಿಡದೇ ಸುರಿಯಿತು. ಇದರಿಂದ ಬಹುತೇಕ ಜನರು ಮನೆಯಲ್ಲಿಯೇ ಕಾಲ ಕಳೆಯುವಂತಾಯಿತು. ಅಗತ್ಯ ವಸ್ತು ಗಳನ್ನು ಖರೀದಿಸಲು ತೊಂದರೆ ಅನುಭವಿಸಿದರು. ಇದರಿಂದ ಜನರ ಸಂಚಾರ ಅಸ್ತವ್ಯಸ್ತವಾಗಿತ್ತು. ಸದ್ಯ ಸರ್ಕಾರಿ ರಜೆ ಇದ್ದ ಕಾರಣ ಕಚೇರಿಗಳಿಗೆ ಆಗಮಿಸುವ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರಿಗೆ ಬಿಡುವು ಸಿಕ್ಕಿದಂತಾಯಿತು.
ಮೈದುಂಬಿ ಹರಿದ ಹಳ್ಳ: ಇಡೀ ದಿನ ಉತ್ತಮ ಮಳೆಯಾದ್ದರಿಂದ ಹನೂರಿನ ಆಂಜನೇಯ ಸ್ವಾಮಿ ದೇಗುಲದ ಮೂಲಕ ಹಾದು ಹೋಗಿರುವ ತಟ್ಟೆಹಳ್ಳವು ಮೈದುಂಬಿ ಹರಿಯಿತು. ಸೇತುವೆ ಹಾಗೂ ಆಸುಪಾಸಿನಲ್ಲಿ ಯಥೇಚ್ಛವಾಗಿ ನೀರು ಹರಿದ ಪರಿಣಾಮ ಸಾರ್ವಜನಿಕರು ಸಂಚರಿಸಲು ಅನ್ಯ ಮಾರ್ಗದಲ್ಲಿ ಸುತ್ತಿ ಬಳಸಿ ತೆರಳುವುದರ ಮೂಲಕ ತೊಂದರೆ ಅನುಭವಿಸಿದರು. ಜತೆಗೆ ಕೆಲವು ಮನೆಗಳಿಗೂ ನೀರು ನುಗ್ಗುವ ಆತಂಕ ಜನರಲ್ಲಿ ಎದುರಾಗಿತ್ತು. ಹಲವು ವರ್ಷದ ಬಳಿಕ ಈ ಹಳ್ಳವು ಮೈದುಂಬಿ ಹರಿದ ಹಿನ್ನಲೆ ದೌಡಾಯಿಸಿದ ಪಟ್ಟಣದ ಜನತೆ ಕುತೂಹಲದಿಂದ ವೀಕ್ಷಿಸಿದರು. ಇನ್ನು ಹನೂರು ಭಾಗದಲ್ಲಿ ರಾಗಿ ಹಾಗೂ ಮುಸುಕಿನ ಜೋಳದ ಫಸಲುಗಳು ತೆನೆ ಕಟ್ಟುವ ಹಂತಕ್ಕೆ ಬಂದಿದ್ದು, ಮಳೆಯ ಅಗತ್ಯತೆ ಇತ್ತು. ಸುರಿದ ಮಳೆಯಿಂದಾಗಿ ಫಸಲುಗಳು ಸಮೃದ್ಧಿಯತ್ತ ಸಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಕೃಷಿ ಚಟುವಟಿಕೆಯತ್ತ ಗಮನಹರಿಸಿದ್ದಾರೆ.
ಅಧಿಕಾರಿಗಳಲ್ಲಿ ಸಮಾಧಾನ ಮೂಡಿಸಿದ ಮಳೆ: ಈ ವರ್ಷ ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕ್ಷೀಣಿಸುತ್ತಿತ್ತು. ಜತೆಗೆ ಬಹುತೇಕ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದವು. ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಕಳೆದ ನಾಲ್ಕೈದು ತಿಂಗಳಿನಿಂದ ತಾಲೂಕಿನ 35ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ನೀರಿಗಾಗಿ ಕೆಲವು ಗ್ರಾಮಗಳಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು. ಇದರಿಂದ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಗ್ರಾಪಂ ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವುದೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕುಡಿಯುವ ನೀರಿನ ಸಂಬಂಧ ತಾಲೂಕು ಪಂಚಾಯಿತಿಯಲ್ಲಿ ಇಒ ಉಮೇಶ್ ಅವರು ಮೇಲಿಂದ ಮೇಲೆ ಪಿಡಿಒಗಳ ಸಭೆ ನಡೆಸುತ್ತಲೇ ಇದ್ದರು.
ಈ ಮಧ್ಯೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಉತ್ತಮ ಮಳೆಯಾದ್ದರಿಂದ ಹಳ್ಳಕೊಳ್ಳಗಳಲ್ಲಿ ನೀರು ಹರಿಯುವುದರ ಮೂಲಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದರೆ, ಬತ್ತಿ ಹೋಗಿದ್ದ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲುವಂತಾಗಿದೆ. ಇದರಿಂದ ಅಂತರ್ಜಲ ಮಟ್ಟ ಕೊಂಚ ಸುಧಾರಿಸಿರುವುದರಿಂದ ಅಧಿಕಾರಿಗಳಿಗೆ ಈ ಮಳೆ ಸಮಾಧಾನ ಮೂಡಿಸಿದ್ದು, ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.