ಜಿಲ್ಲೆ

ನರೇಗಾ ಕಾಮಗಾರಿ ದಾಖಲೆ ಉತ್ತಮ ನಿರ್ವಹಣೆ

ಕೋಲಾರ ಡೆಸ್ಕ್

ಬೂದಿಕೋಟೆ: ಬಲಮಂದೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಕಾಮಗಾರಿಯ ಸಂಪೂರ್ಣ ದಾಖಲೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ ಎಂದು ನರೇಗಾ ಸಾಮಾಜಿಕ ಲೆಕ್ಕಪರಿಶೋಧನಾಧಿಕಾರಿ ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಬಳಿಯ ಬಲಮಂದೆ ಗ್ರಾಪಂ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ನಡೆದಿರುವ ಎಲ್ಲ ಕಾಮಗಾರಿಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಸಾರ್ವಜನಿಕರು ಸಹ ಯಾವುದಾದರೂ ಲೋಪದೋಷಗಳಿದ್ದರೆ ತಿಳಿಸಬಹುದು, ನಾವು ಅದನ್ನು ಪರಿಶೀಲನೆ ಮಾಡಿ ಸರಿಪಡಿಸುತ್ತೇವೆ ಎಂದರು.

ಪಿಡಿಒ ಮಧುಚಂದ್ರ ಮಾತನಾಡಿ, ರೈತರಿಗೆ ತುಂಬಾ ಅನುಕೂಲವಾಗುವ ಯೋಜನೆ ಯಾವುದಾದರೂ ಇದ್ದರೆ ಅದು ಎಂಜಿಎನ್​ಆರ್​ಇಜಿ ಯೋಜನೆಯಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ರೈತರಿಗೆ ಸಂಪೂರ್ಣ ಮಾಹಿತಿ ನೀಡುತ್ತಿರುವುದರಿಂದ ನಮ್ಮ ಭಾಗದಲ್ಲಿ ನರೇಗಾ ಕಾಮಗಾರಿಯು ಉತ್ತಮವಾಗಿ ನಡೆಯುತ್ತಿದೆ. ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿಯ ಜತೆಗೆ ಕಾಲುವೆ, ಕುಂಟೆಗಳು, ಕೆರೆಗಳ ಅಭಿವೃದ್ಧಿ ಮಾಡುತ್ತಿರುವುದರಿಂದ ನೈಸರ್ಗಿಕವಾಗಿ ಪ್ರಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಈ ಬಾರಿ ತಾಲೂಕಿನಲ್ಲಿ ಮೊದಲನೇ ಬಾರಿಗೆ ಲೆಕ್ಕಪರಿಶೋಧನಾ ನಮ್ಮ ಪಂಚಾಯಿತಿಯಿಂದಲೇ ಪ್ರಾರಂಭವಾಗಿದ್ದು ಅಧಿಕಾರಿಗಳೆಲ್ಲರೂ ಕ್ಷೇತ್ರ ಪರಿಶೀಲನೆ ಹಾಗೂ ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ ಎಂದರು.

2024-&25 ನೇ ಸಾಲಿನ ಸಂಪೂರ್ಣ ವರದಿಯನ್ನು ಓದಿ ಸಾರ್ವಜನಿಕರ ಮುಂದೆ ಮಂಡಿಸಿದರು.

ಮುಖಂಡರಾದ ಗೀತಾ ನಾರಾಯಣಸ್ವಾಮಿ, ಸೋಮುಜಿರಾವ್​, ಕಾಶಿನಾಥ್​ ರಾವ್​ ಇತರರು ಇದ್ದರು.