ಜಿಲ್ಲೆ

ಬಾಳೆ ಬೆಳೆಗಾರರಿಗೆ ಶುಕ್ರದೆಸೆ

ಮುಂಡಗೋಡ: ದಿನದಿಂದ ದಿನಕ್ಕೆ ಬಾಳೆ ಕಾಯಿ ದರ ಏರಿಕೆಯಾಗುತ್ತಿರುವುದರಿಂದ ಬಾಳೆ ಬೆಳೆಗಾರರಿಗೆ ಆದಾಯ ಕೈತುಂಬುತ್ತಿದೆ.

ಉತ್ತಮವಾಗಿ ಬೆಳೆ ಬಂದಾಗ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ, ಬೆಳೆ ಇರುವುದಿಲ್ಲ. ಎರಡು ಇದ್ದಾಗ ಪ್ರಕೃತಿಯ ಮುನಿಸಿನಿಂದ ಸಂಪೂರ್ಣ ಬೆಳೆ ಹಾನಿ ಉಂಟಾಗುತ್ತದೆ. ಈ ಪರಿಸ್ಥಿತಿಯನ್ನು ಪ್ರತಿವರ್ಷ ತಾಲೂಕಿನ ರೈತರು ಅನುಭವಿಸುತ್ತಲೆ ಬಂದಿದ್ದಾರೆ. ಆದರೆ, ಈ ಬಾರಿ ಬಾಳೆ ಬೆಳೆಗೆ ಉತ್ತಮ ಬೆಲೆ ಬಂದಿದ್ದು, ಸದ್ಯ ಬಾಳೆ ಬೆಳೆಗಾರರಿಗೆ ಶುಕ್ರದೆಸೆ ಆರಂಭವಾಗಿದೆ.

ತಾಲೂಕಿನಲ್ಲಿ ಭತ್ತದ ಬೆಳೆಯೆ ಪ್ರಮುಖ ಬೆಳೆಯಾಗಿತ್ತು. ಆದರೆ, ವರ್ಷಗಳು ಕಳೆದಂತೆ ಅಡಕೆ, ಬಾಳೆ, ಶುಂಠಿ, ಕಬ್ಬು, ಮಾವು ಸೇರಿ ಇತರ ಆರ್ಥಿಕ ಬೆಳೆಗಳತ್ತ ಮುಖ ಮಾಡಿದ್ದಾರೆ.

ಗದ್ದೆಗಳಲ್ಲಿ ನೀರಿನ ಸೌಲಭ್ಯವಿರುವ ಬಹುತೇಕರು ಅಡಕೆಯೊಂದಿಗೆ ಬಾಳೆ ಬೆಳೆಯತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಹೊಂದುವ ಆಸೆಯಿಂದ ಬಾಳೆ ಬೆಳೆದಿದ್ದಾರೆ. ಸದ್ಯ ತಾಲೂಕಿನಲ್ಲಿ ಅತಿಕ್ರಮಣ ಸೇರಿ 2 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ.

ಕೆಲ ತಿಂಗಳಿಂದ ಬಾಳೆ ಕಾಯಿಗೆ ಉತ್ತಮ ದರ ಬರುತ್ತಿದೆ. ದಿನದಿಂದ ದಿನಕ್ಕೆ ಬಾಳೆಕಾಯಿ ಬೆಲೆ ಏರುತ್ತಿದೆ. ಆರಂಭದಲ್ಲಿ ಪ್ರತಿ ಕೆಜಿ ಬಾಳೆ ಕಾಯಿಗೆ 30 ರೂ.ಗಳಿಂದ 40 ರೂ. ಬೆಲೆಯಿತ್ತು. ಆದರೆ, ಒಂದು ತಿಂಗಳ ಅಂತರದಲ್ಲಿ ಬಾಳೆ ಕಾಯಿಯ ಬೆಲೆ 50ರಿಂದ 60 ರೂ. ಗಳಿಗೆ ತಲುಪಿದೆ. ಇದರಿಂದ ಬೆಳೆಗಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬಾಳೆಯ ಬೆಳೆಗಾರರ ಸಂಖ್ಯೆ ತಾಲೂಕಿನಲ್ಲಿ ಕಡಿಮೆಯಾಗುತ್ತಿದೆ. ತಾಲೂಕಿನಲ್ಲಿ ಬೆಳೆದ ಬಾಳೆ ಬೆಳೆಯನ್ನು ವ್ಯಾಪಾರಸ್ಥರು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ರಪ್ತು ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ಬಾಳೆ ಹಣ್ಣು ದುಬಾರಿಯಾಗುತ್ತಿದೆ. ಇದೀಗ ಗಣೇಶ ಚತುರ್ಥಿ ಇರುವ ಕಾರಣ ಬಾಳೆ ಬೆಲೆ ಮತ್ತಷ್ಟು ಏರಲು ಕಾರಣವಾಗಿದೆ.

ಪ್ರತಿಕೆಜಿಗೆ 35ರಿಂದ 40 ರೂ. ವರೆಗೆ ಬಾಳೆಕಾಯಿಯನ್ನು ಖರೀದಿಸಿ ಪಕ್ಕದ ಗೋವಾ ರಾಜ್ಯಕ್ಕೆ ಕಳುಹಿಸುತ್ತಿದ್ದೆವೆ. ಗೋವಾದಲ್ಲಿ ಪ್ರತಿ ಕೆಜಿ ಬಾಳೆಕಾಯಿಗೆ 50 ರಿಂದ 60 ರೂ. ಬೆಲೆ ಸಿಗುತ್ತಿದೆ. ಇದರಿಂದ ಬಾಳೆ ವ್ಯಾಪಾರ ಮಾಡುವ ನಮಗೂ ಸ್ವಲ್ಪ ಲಾಭ ದೊರೆಯುತ್ತಿದೆ. | ಜಾಫರಸಾಬ್ ಬಾಳೆ ವ್ಯಾಪಾರಸ್ಥ
ಕಳೆದ ಎರಡು ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬಾಳೆಕಾಯಿ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಾಳೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ಹಬ್ಬಗಳು ಬಂದಾಗ ಬಾಳೆಯ ಬೆಲೆ ದಿಢೀರ್ ಏರಿಕೆಯಾಗುತ್ತಿದೆ. ಬೆಳೆಗಾರರು ಉತ್ತಮ ಲಾಭದಲ್ಲಿದ್ದಾರೆ. | ಕೃಷ್ಣ ಕೋಳೂರ ತೋಟಗಾರಿಕೆ ಅಧಿಕಾರಿ, ಮುಂಡಗೋಡ