ಕಡೂರು: ಆರೋಗ್ಯಕರ ಜೀವನ ಕಾಪಾಡಿಕೊಳ್ಳಲು ಪ್ರತಿನಿತ್ಯ ಒಂದು ತಾಸು ಯೋಗ ಮಾಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಗಣಪತಿ ಪೆಂಡಾಲ್ ಆವರಣದಲ್ಲಿ ಚೇತನ ಆಸ್ಪತ್ರೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಂದ ಆರೋಗ್ಯಕರ ಹೃದಯಕ್ಕೆ ನಮ್ಮ ಹೆಜ್ಜೆಯ ಧ್ಯೇಯದೊಂದಿಗೆ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಂಕ್‌ಪುಡ್‌ಗಳ ಸೇವನೆಯಿಂದ ಹೃದಯದ ಆರೋಗ್ಯವನ್ನು ನಾವುಗಳೇ ಹಾಳುಮಾಡಿಕೊಳ್ಳುತ್ತಿದ್ದೇವೆ ಎಂದರು.
ರಾಜ್ಯಾದ್ಯಂತ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ದೈಹಿಕ ಶ್ರಮವಿಲ್ಲದೆ ಮಾನಸಿಕ ಒತ್ತಡದಲ್ಲಿಯೇ ದಿನಗಳನ್ನು ಕಳೆಯುವ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಯುವಸಮೂಹ ಸೇರಿದಂತೆ ಶ್ರಮಿಕ ವರ್ಗದ ಕಾರ್ಮಿಕರು ಹೆಚ್ಚು ಯೋಗಾಭ್ಯಾಸಗಳಲ್ಲಿ ತೊಡಗಿಸಿಕೊಂಡು ಹೃದಯವನ್ನು ಕಾಪಾಡಿಕೊಳ್ಳ ಬೇಕು ಎಂದರು. ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಜಂಕ್‌ಪುಡ್ ಸೇವನೆಯಿಂದ ಗೊತ್ತಿಲ್ಲದೆ ವಿಷ ಸೇವೆಸುತ್ತಿದ್ದೇವೆ. ರಾಸಾಯನಿಕ ಮಿಶ್ರಿತ ಆಹಾರದಿಂದ ಕಾಯಿಲೆಗಳು ಮತ್ತಷ್ಟು ಹೆಚ್ಚಾಗುತ್ತಿದೆ. ಯುವಕರು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.
ಚೇತನ್ ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರುಶೇಖರ್, ಡಾ. ಸೂರ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ. ರಾಜಣ್ಣ, ಮುಕುಂದರಾವ್, ರವಿ, ಹರೀಶ್, ವಡೇರಹಳ್ಳಿ ಅಶೋಕ್, ಕೃಷ್ಣಸ್ವಾಮಿ, ಪುಂಡಲಿಕರಾವ್, ಬ್ರಹ್ಮಕುಮಾರಿ ಜ್ಞಾನೇಶ್ವರಿ, ಮಂಜುನಾಥ್ ಹಾಗೂ ಕಾಲೇಜಿನ ಪಾಧ್ಯಾಪಕರು ಇದ್ದರು.