ಸೋಮವಾರಪೇಟೆ: ವಿಶ್ವ ಹೃದಯ ದಿನ ಅಂಗವಾಗಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಶಾಲಾ ಶಿಕ್ಷಕರಿಗೆ ಇತ್ತೀಚೆಗೆ ಹೃದಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಹಿಮಾನಿ, ಎಲ್ಲರೂ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ನಿಯಮಿತ ಹೃದಯ ತಪಾಸಣೆಯ ಮೂಲಕ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮಾತನಾಡಿ, ಆರೋಗ್ಯಕರ ಹೃದಯ ಉತ್ತಮ ಜೀವನವನ್ನು ಖಚಿತಪಡಿಸುತ್ತದೆ ಎಂಬ ಸಂದೇಶ ದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಭವಿಷ್ಯದ ಪೀಳಿಗೆಯನ್ನು ರೂಪಿಸುವಲ್ಲಿ ಶಿಕ್ಷಕರ ಅವಿರತ ಪ್ರಯತ್ನಗಳನ್ನು ಗುರುತಿಸಿ ಶಿಬಿರವನ್ನು ಆಯೋಜಿಸಲಾಗಿದೆ. ನಮ್ಮ ಕ್ಲಬ್ ಶಿಕ್ಷಕರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವ ಕೆಲಸ ಮಾಡುತ್ತಿದೆ ಎಂದರು.
ಶಿಬಿರದಲ್ಲಿ ರಕ್ತದೊತ್ತಡ, ಇಸಿಜಿ ಮತ್ತು ಇತರ ಹೃದಯ ಸಂಬಂಧಿತ ತಪಾಸಣೆ ನಡೆಸಲಾಯಿತು. ಶಿಕ್ಷಕರು ಶಿಬಿರದ ಪ್ರಯೋಜನ ಪಡೆದರು. ಸಂಸ್ಥೆ ಪದಾಧಿಕಾರಿಗಳಾದ ಸಂಗೀತ ದಿನೇಶ್, ಸುವಿನಾ ಕೃಪಾಲ್, ಲತಾ ನಾಗೇಶ್ ಸೇರಿದಂತೆ ಹಲವರು ಇದ್ದರು.