ದಾವಣಗೆರೆ: ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಪತಂಜಲಿ ಯೋಗ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಐದು ದಿನಗಳ ಯೋಗ ಜೀವನ ದರ್ಶನ-2022ರ ಪ್ರಯುಕ್ತ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಯೋಗ ನಡಿಗೆ ನಡೆಯಿತು.
ಬಾಪೂಜಿ ಬ್ಯಾಂಕ್ ಸಮುದಾಯ ಭವನದಿಂದ ಆರಂಭವಾದ ನಡಿಗೆಯಲ್ಲಿ 600ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿದ್ದರು. ಗುಂಡಿ ವೃತ್ತ, ಬಸ್ ನಿಲ್ದಾಣ, ವಿನೋಬ ನಗರ ಮತ್ತಿತರ ರಸ್ತೆಗಳಲ್ಲಿ ಯೋಗದ ಮಹತ್ವದ ಸಂದೇಶವನ್ನು ಸಾರಿದರು.
ಯೋಗದಿಂದ ಆರೋಗ್ಯ, ಉತ್ತಮ ಜೀವನ. ಉತ್ತಮ ಆರೋಗ್ಯ ಜೀವನಕ್ಕೆ ಯೋಗದ ಶ್ರೀರಕ್ಷೆ, ಯೋಗಾಭ್ಯಾಸದಿಂದ ದೇಶದ ಆರೋಗ್ಯ ಎಂದು ಬರೆದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಮುಖಂಡರು, ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ದಿನವೂ ನಿಯಮಿತವಾಗಿ ಯೋಗಾಭ್ಯಾಸ ಮಾಡಿದರೆ ಆರೋಗ್ಯವಂತ ಜೀವನದ ಜತೆಗೆ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಸಂಘಟನೆಯ ಮುಖಂಡರಾದ ಮಂಜುನಾಥ್, ಕಲ್ಲೇಶ್, ಜಯಪ್ರಕಾಶ್, ಸುರೇಶ್, ಸತೀಶ್, ಮಂಜುಳಾ, ಭಾರತಿ, ವಿವಿಧ ರಾಜ್ಯ ಹಾಗೂ ಇರಾನ್, ಸಿರಿಯಾ, ಮೊಜಾಂಬಿಕ್‌ನಿಂದ ಬಂದ ಯೋಗಾಸಕ್ತರು ಪಾಲ್ಗೊಂಡಿದ್ದರು.