ಸಿಂಧನೂರು ತಾಲೂಕಿನ ನಾಲ್ಕುಮೈಲ್‌ಕ್ಯಾಂಪ್‌ನಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಭತ್ತದ ಬೆಳೆ ನಷ್ಟವನ್ನು ಜಂಟಿ ಕೃಷಿ ನಿರ್ದೇಶಕ ಜಯಪ್ರಕಾಶ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ವೀಕ್ಷಿಸಿದರು. ತಹಸೀಲ್ದಾರ್ ಅರುಣ್ ದೇಸಾಯಿ, ನಿರುಪಾದೆಪ್ಪ ವಕೀಲ, ಸಿದ್ದನಗೌಡ ಮಲ್ಲಾಪುರ ಇತರರಿದ್ದರು. 
ಜಿಲ್ಲೆ

ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದವರಿಗೆ ಆಘಾತ

ರುದ್ರಪ್ಪ ವಾಲಿ

ಸಿಂಧನೂರು: ತಾಲೂಕಿನಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ನಷ್ಟ ಆಗಿದ್ದು ಈಗಾಗಲೇ ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ಸರ್ವೇಗೆ ಮುಂದಾಗಿದ್ದು ಮೂರ‌್ನಾಲ್ಕು ದಿನಗಳಲ್ಲಿ ಬೆಳೆ ನಷ್ಟ ಸರ್ವೇ ವರದಿ ಸಿದ್ಧಗೊಳಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಜಯಪ್ರಕಾಶ ತಿಳಿಸಿದರು.

ತಾಲೂಕಿನ ವಿರೂಪಾಪುರ, ಅರಳಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಭತ್ತದ ಬೆಳೆ ನಷ್ಟ ವೀಕ್ಷಿಸಿ ನಂತರ ಮಾತನಾಡಿದರು. ತಾಲೂಕಿನಲ್ಲಿ ಭತ್ತದ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಆಗಿರುವ ಮಾಹಿತಿ ಇದೆ. ಈಗಾಗಲೇ ಕಂದಾಯ ಅಧಿಕಾರಿಗಳು ಸರ್ವೇಗೆ ಮುಂದಾಗಿದ್ದಾರೆ.

ನಷ್ಟ ಹೊಂದಿದ ಎಲ್ಲ ರೈತರ ಜಮೀನುಗಳ ಸರ್ವೇ ನಡೆಸಬೇಕಿಸಿದ್ದು ನ.20 ರೊಳಗೆ ಸರ್ವೇ ಕೆಲಸ ಪೂರ್ಣಗೊಳಿಸುವ ಭರವಸೆ ಇದೆ. ಸದ್ಯ ಭೇಟಿ ನೀಡಿದ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಭತ್ತವು ನೆಲಕ್ಕೆ ಬಿದ್ದಿದೆ. ಉತ್ತಮ ಫಸಲು ಪಡೆದಿದ್ದ ರೈತರಿಗೆ ಅಕಾಲಿಕ ಮಳೆ ತೊಂದರೆ ಉಂಟು ಮಾಡಿದೆ ಎಂದರು. ತಹಸೀಲ್ದಾರ್ ಅರುಣ್ ದೇಸಾಯಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ನಿರುಪಾದೆಪ್ಪ ವಕೀಲ, ಸಿದ್ದನಗೌಡ ಮಲ್ಲಾಪುರ, ಶಿವರಾಜ, ವೆಂಕಟರಡ್ಡೆಪ್ಪಗೌಡ, ಶೇಖರಗೌಡ ವಿರೂಪಾಪುರ, ಗ್ರಾಪಂ ಸದಸ್ಯ ಈಶಪ್ಪಗೌಡ, ಗೋಪಿ, ಹನುಮೇಶ ಬಾಗೋಡಿ ಇದ್ದರು.

ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಭತ್ತದ ಬೆಳೆ ನಷ್ಟವಾಗಿದೆ. ತಾಲೂಕಿನ ಗುಂಜಳ್ಳಿಕ್ಯಾಂಪ್, ಏಳುಮೈಲ್‌ಕ್ಯಾಂಪ್, ಮಲ್ಲದಗುಡ್ಡ, ವಿರೂಪಾಪುರ ಹಾಗೂ ಅರಳಹಳ್ಳಿ ಗ್ರಾಮಗಳಲ್ಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಬೆಳೆ ನಷ್ಟದ ಬಗ್ಗೆ ಸರ್ಕಾರ ಹಾಗೂ ಕಂದಾಯ ಸಚಿವರಿಗೆ ತಿಳಿಸಲಾಗಿದೆ. ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ನಷ್ಟದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆರ್.ಬಸನಗೌಡ ತುರ್ವಿಹಾಳ  ಶಾಸಕ