ಬೆಳಗಾವಿ ನಗರದ ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಸುಧಾಂಶು ದೀಕ್ಷಿತ್, ಸುನೀಲ ದಾಗರ, ಡಾ.ಎಚ್.ಎಸ್.ಮೇಲಿನಮನಿ, ಡಾ.ಜ್ಯೋತಿ ಕವಳೇಕರ, ಕಲ್ಲಪ್ಪ ಪಾಟೀಲ, ಹರದೇವಸಿಂಗ್, ಡಾ.ಮಾನೆ ಇತರರಿದ್ದರು. 
ಜಿಲ್ಲೆ

ಉತ್ತಮ ಆರೋಗ್ಯಕ್ಕೆ ರಕ್ತದಾನ ಮಾಡಲಿ

ಬೆಳಗಾವಿ: ರಕ್ತದಾನವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಸಾಮಾಜಿಕ ಸೇವೆಗಳಲ್ಲಿ ರಕ್ತದಾನವು ಮಹತ್ವದ್ದಾಗಿದೆ ಎಂದು ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಸುಧಾಂಶು ದೀಕ್ಷಿತ್ ಹೇಳಿದರು.

ನಗರದ ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ ದಿನಾಚರಣೆ ಅಂಗವಾಗಿ ಕರ್ನಾಟಕ ಎನ್‌ಸಿಸಿ ಬಟಾಲಿಯನ್, ಲಿಂಗರಾಜ ಕಾಲೇಜು, ಆರ್.ಎಲ್.ವಿಜ್ಞಾನ ಕಾಲೇಜುಗಳ ಆರ್ಮಿ ಹಾಗೂ ಎರ್‌ವಿಂಗ್ ಎನ್‌ಸಿಸಿ ಘಟಕ, ರೆಡ್ ಕ್ರಾಸ್, ಎನ್‌ಎಸ್‌ಎಸ್ ಘಟಕ ಹಾಗೂ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತ ಭಂಡಾರ ಸೆಂಟರ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನಾಂಗದಲ್ಲಿ ರಕ್ತದಾನದ ಪ್ರಜ್ಞೆ ಮೂಡಿಸುವುದು ಅಗತ್ಯವಾಗಿದೆ. ಸ್ವಯಂ ಇಚ್ಛೆಯಿಂದ ಯುವಕರು ಮುಂದೆ ಬಂದು ರಕ್ತದಾನ ಮಾಡುವಂತಾಗಬೇಕು ಎಂದು ಕರೆ ನೀಡಿದರು. ಲ್ಟೆನೆಂಟ್ ಕರ್ನಲ್ ಸುನೀಲ ದಾಗರ ಮಾತನಾಡಿ, ಎನ್‌ಸಿಸಿ ಕೆಡೆಟ್‌ಗಳಲ್ಲಿ ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ. ಯುವಕರು ನಮ್ಮ ದೇಶದ ಬೆನ್ನೆಲುಬು. 1948ರಲ್ಲಿ ಸ್ಥಾಪನೆಗೊಂಡ ದೇಶದ ದೊಡ್ಡ ಸಂಘಟನೆ ಎನ್‌ಸಿಸಿ, ಯುವಕ ಯುವತಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ. ಎನ್‌ಸಿಸಿ ದಿನಾಚರಣೆಯನ್ನು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ ಎಂದರು. ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಆರ್‌ಎಲ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಜ್ಯೋತಿ ಕವಳೇಕರ, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ, ಹರದೇವಸಿಂಗ್, ಡಾ.ಮಾನೆ, ಡಾ. ಆನಂದ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ.ಮಹೇಶ ಗುರನಗೌಡರ, ಕ್ಯ್ಟಾನ್ ಡಾ.ಶಿವಾನಂದ ಬುಲಬುಲೆ, ಎನ್‌ಎಸ್‌ಎಸ್ ಘಟಕದ ಪ್ರಶಾಂತ ಕೊಣ್ಣೂರ, ರೆಡ್ ಕ್ರಾಸ್ ಅಧಿಕಾರಿ ಪ್ರೊ. ಸುಮಿತ್ ಮೂಡಲಗಿ ಇತರರಿದ್ದರು.