ಅರಸೀಕೆರೆ ಗ್ರಾಮಾಂತರ: ಲಕ್ಷಾಂತರ ಹಣವನ್ನು ಖಾಸಗಿ ಶಾಲೆಗಳಿಗೆ ನೀಡಿ ಮಕ್ಕಳ ಭವಿಷ್ಯವನ್ನು ರೂಪಿಸಲು ಹೊರಟಿರುವ ಪಾಲಕರನ್ನು ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ನೋಡುವಂತೆ ಮಾಡಲಾಗುತ್ತಿದೆ ಎಂದು ಹಾಸನ ಜಿಲ್ಲಾ ಅಕ್ಷರ ದಾಸೋಹ ಯೋಜನೆ ಸಹ ನಿರ್ದೇಶಕ ಯೋಗೀಶ್ ಹೇಳಿದರು.
ತಾಲೂಕಿನ ಬಾಣಾವರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)ದ ಆವರಣದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ, ಅರಸಿಕೆರೆ ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದಿಂದ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರ ಜತೆಗೆ ನಿತ್ಯ ಉತ್ತಮವಾದ ಆಹಾರ ಹಾಗೂ ಮಕ್ಕಳಿಗೆ ಪೋಷಕಾಂಶದ ಕೊರತೆ ಇರುವುದರಿಂದ ನಿತ್ಯವೂ ಬಾಳೆಹಣ್ಣು, ಕೋಳಿ ಮೊಟ್ಟೆಗಳನ್ನು ನೀಡುತ್ತ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸಹಕರಿಸಬೇಕು ಎಂದರು.
ಉಪತಹಸಿಲ್ದಾರ್ ಲಿಂಗರಾಜು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ ಪಾಲಕರು ತಮ್ಮ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ನಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಮನ್ನಣೆ ನೀಡುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣವನ್ನು ನೀಡದೆ ಜೀವನದ ಪರಿಪಾಠಗಳನ್ನು ಕಲಿಸುತ್ತವೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು
ಗ್ರಾಪಂ ಅಧ್ಯಕ್ಷೆ ವೀಣಾ ವಿಶ್ವನಾಥ್ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡುವಲ್ಲಿ ಮುಂದಾಗಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕುಮಾರ್, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಶಂಕರ್ ಮಾತನಾಡಿದರು. ಉಪಪ್ರಾಂಶುಪಾಲ ವಾಸುದೇವ್, ಸಿಆರ್‌ಪಿ ಪ್ರಿಯಾಂಕಾ, ಶಿಕ್ಷಕರಾದ ಉಮೇಶ್, ಸುಧಾ ಶ್ರೀನಿವಾಸ್, ವಿಶ್ವನಾಥ್ ಇತರರು ಇದ್ದರು.