ಮೆಣಸೆ ರಾಜೀವ್‌ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರೋಪದಲ್ಲಿ ವಿದ್ವಾಂಸ ಪ್ರಭಾಕರ್ ಶರ್ಮ ಮಾತನಾಡಿದರು. ಪರಮೇಶ್ವರ ನಾರಾಯಣ ಶಾಸೀ, ಸಿಎಸ್‌ಎಸ್‌ಎನ್ ಮೂರ್ತಿ, ನವೀನ್ ಹೊಳ್ಳ ಇದ್ದರು. 
ಜಿಲ್ಲೆ

ಸತ್ಕಾರ್ಯಗಳೇ ಕಣ್ಣಿಗೆ ಕಾಣುವ ಧರ್ಮ

ಎಸ್.ಎನ್.ರವೀಂದ್ರ

ಶೃಂಗೇರಿ: ಧರ್ಮವನ್ನು ಕಾಣಲಾಗದು. ಆದರೆ ಸಜ್ಜನರು, ಸಾಧುಶ್ರೇಷ್ಠರು ಮಾಡುವ ಸತ್ಕಾರ್ಯಗಳು ಧರ್ಮ ಎಂದು ಹೈದರಾಬಾದಿನ ಸಂಸ್ಕೃತ ವಿದ್ವಾಂಸ ಪ್ರಭಾಕರ ಶರ್ಮ ತಿಳಿಸಿದರು.

ಮೆಣಸೆ ರಾಜೀವ್‌ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಒಂದು ವಾರ ಕಾಲ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ನಾವು ನಿರಂತರ ಉತ್ತಮ ವಿಷಯಗಳನ್ನು ತಿಳಿದುಕೊಳ್ಳಬೇಕು. ವೇದಗಳ ಜ್ಞಾನ ಅನನ್ಯ. ಅದರಲ್ಲಿ ಯಾವುದೇ ಅಹಿತ ವಿಷಯಗಳು ಇಲ್ಲ. ಮಾನವನ ಹಿತಕ್ಕಾಗಿ ರಚಿತವಾದ ಅದ್ಭುತ ಗ್ರಂಥಗಳಲ್ಲಿ ಇರುವ ಜ್ಞಾನ ನಮಗೆ ಪ್ರಜ್ಞಾನ ನೀಡುತ್ತದೆ. ಆತ್ಮಸಾಕ್ಷಿಗೆ ವಿರುದ್ಧವಾದ ಕಾರ್ಯಗಳು ಸಮಾಜಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ. ಒಳ್ಳೆಯದನ್ನು ತಿಳಿದುಕೊಳ್ಳಬೇಕು ಎಂದು ಮಹಾಭಾರತದಲ್ಲಿ ಉಲ್ಲೇಖವಿದೆ ಎಂದರು.
ಜೀವನದ ಮೌಲ್ಯಗಳನ್ನು ಅರಿತುಕೊಂಡಾಗ ಮಾತ್ರ ಸಮಾಜದ ಗೌರವಕ್ಕೆ ಪಾತ್ರವಾಗುತ್ತೇವೆ. ಯುವಶಕ್ತಿ ಭಾರತದ ಅಮೂಲ್ಯ ಸಂಪತ್ತು. ಅವರಿಗೆ ಉನ್ನತ ವಿಷಯಗಳನ್ನು ಬೋಧಿಸುವ ಮೂಲಕ ಸಂಸ್ಕೃತಿ, ಸಂಸ್ಕಾರದ ಪರಿಜ್ಞಾನ ನೀಡಬೇಕಿದೆ. ವಿಜ್ಞಾನ, ಖಗೋಳ ಜ್ಞಾನ, ತಂತ್ರಜ್ಞಾನ ಸಮಾಜದ ಶಕ್ತಿ. ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಶೃಂಗೇರಿ ಸಂಸ್ಕೃತ ಗ್ರಾಮವಾಗಬೇಕು ಎಂಬ ಆಶಯವನ್ನು ಇಟ್ಟುಕೊಂಡಿದ್ದಾರೆ. ಅವರ ಆಶಯಗಳಿಗೆ ಮೆಣಸೆ ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ತಿಳಿಸಿದರು.
ಪತ್ರಕರ್ತರಾದ ಎಚ್.ಎಸ್.ಸುಬ್ರಹ್ಮಣ್ಯ, ಜೆ.ರಾಘವೇಂದ್ರ, ಅಭಿನವ್, ಕೆರೆಮನೆ ಗೋಪಾಲಕೃಷ್ಣ, ಕರುವಾನೆ ರಮೇಶ್, ಕೆ.ಎನ್.ರಾಘವೇಂದ್ರ, ಸಸಿಮನೆ ಶಿವಶಂಕರ್, ಶೋಭಾ ಅನಂತಯ್ಯ ಅವರನ್ನು ಗೌರವಿಸಲಾಯಿತು.
ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಸಿ.ಎಸ್.ಎಸ್.ನರಸಿಂಹಮೂರ್ತಿ, ಬೆಂಗಳೂರಿನ ವಿಶ್ರಾಂತ ಉಪಕುಲಪತಿ ಪರಮೇಶ್ವರ ನಾರಾಯಣಶಾಸಿ, ಪ್ರೊ. ನವೀನ್ ಹೊಳ್ಳ, ಕೃಷ್ಣಾನಂದ ಪದ್ಮನಾಭ ಇದ್ದರು.