ಜಿಲ್ಲೆ

ಪರಿಹಾರ ರೂಪದಲ್ಲಿ ರಸಗೊಬ್ಬರ, ಸುಣ್ಣ ವಿತರಿಸಿ

reportermys

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಮಳೆ ಅಬ್ಬರಕ್ಕೆ ಕಾಫಿ ಉದುರುವ ಸಮಸ್ಯೆ ಅನುಭಸುತ್ತಿರುವ ಬೆಳೆಗಾರರಿಗೆ ಗುಣಮಟ್ಟದ ರಸಗೊಬ್ಬರ, ಸುಣ್ಣ ಪರಿಹಾರ ರೂಪದಲ್ಲಿ ವಿತರಿಸಲು ಸರ್ಕಾರ ಮುಂದಾಗಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.

ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಗೋಣಿಕೊಪ್ಪ ಸಿಲ್ವರ್‌ಸ್ಕೈ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿಕ ರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮುಕ್ತ ಅಭಿಪ್ರಾಯ ವ್ಯಕ್ತ ಪಡಿಸಿದರು. ಆಗಸ್ಟ್ ತಿಂಗಳಲ್ಲಿ ನೆಲಕಚ್ಚುತ್ತಿದ್ದ ಬೆಳೆಗಳು ಈ ವರ್ಷ ಒಂದು ತಿಂಗಳು ಮುನ್ನ ನೆಲದಲ್ಲಿ ಕಾಣುವಂತಾಗಿದೆ. ಮುಂಗಾರು, ಹಿಂಗಾರು ಮುಗಿಯಲು ಸಾಕಷ್ಟು ಸಮಯರುವುದರಿಂದ ನಮ್ಮಲ್ಲಿ ಭಯ ಕಾಡುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಹಣದ ರೂಪದಲ್ಲಿ ನೀಡುವ ಪರಿಹಾರ ಶಾಶ್ವತ ಪರಿಹಾರವಾಗದು. ಕಾಫಿ ಉದುರಲು ನೈಜ ಸಮಸ್ಯೆ ಮೂಲ ಅರಿಯಲು ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಹಾಗೂ ವಿಜ್ಞಾನಿಗಳು ಮುಂದಾಗಬೇಕು. ಅತೀವೃಷ್ಠಿ ಸಂದರ್ಭ ಮಾತ್ರ ಹೆಚ್ಚು ಬೆಳೆ ನಾಶವಾಗಲು ಮೂಲ ಕಾರಣ, ಅದಕ್ಕೆ ಬೇಕದ ಪರಿಹಾರ, ಮಾರ್ಗೋಪಾಯ ಪತ್ತೆ ಹಚ್ಚಬೇಕು. ಇದಕ್ಕೆ ಪೂರಕ ಪರಿಹಾರವನ್ನು ಕೃಷಿ ಉತ್ಪನ್ನದ ಮೂಲಕವೂ ನೀಡಲು ಅವಕಾಶವಿದೆ. ಹಣ ನೀಡುವ ಪರಿಹಾರ ತಾತ್ಕಾಲಿಕವಾಗಿ ಮಾತ್ರ ತೃಪ್ತಿಕೊಡುತ್ತದೆ. ಸಮಸ್ಯೆಯ ನೈಜತೆಗೆ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದರು.

ಕೃಷಿಕ ಕೊಲ್ಲೀರ ಯು. ಬೋಪಣ್ಣ ಮಾತನಾಡಿ, ಹಲವು ವರ್ಷಗಳಿಂದ ಗುಣಮಟ್ಟದ ಗೊಬ್ಬರ ರೈತರಿಗೆ ದೊರೆಯುತ್ತಿಲ್ಲ. ಸಂಪೂರ್ಣ ಗೊಬ್ಬರ ಹೆಚ್ಚು ಪ್ರಯೋಜನವಾಗುತ್ತಿತ್ತು. ಈಗ ಇಂತಹ ಗೊಬ್ಬರ ಪೂರೈಕೆ ಕಡಿಮೆಯಾಗಿದೆ. ಕಳಪೆ ಗುಣಮಟ್ಟದ ಗೊಬ್ಬರ ನೀಡಿ ರೈತರ ಆರ್ಥಿಕತೆಗೆ ಧಕ್ಕೆಯಾಗುವಂತಾಗಿದೆ. ಬೆಳೆ ಮತ್ತು ಹಣ ನಷ್ಟವನ್ನು ಬೆಳೆಗಾರರು ಅನುಭವಿಸುವಂತಾಗಿದೆ ಎಂದು ನೋವು ಹಂಚಿ ಕೊಂಡರು.

ಕುಟ್ಟಂದಿ ಗ್ರಾಮಕ್ಕೆ ಈ ವರ್ಷ ೧೦೨ ಇಂಚು ಮಳೆಯಾಗಿದೆ. ಕಳೆದ ೧೫ ದಿನಗಳಲ್ಲಿ ೬೬ ಇಂಚು ಮಳೆ ಬಿದ್ದಿದ್ದು, ಕಳೆದ ವರ್ಷದ ಮಳೆಗೂ, ಪ್ರಸ್ತುತ ವರ್ಷದ ಮಳೆಗೂ ೪೩ ಇಂಚು ಮಳೆ ಹೆಚ್ಚು ಬಿದ್ದಿದೆ. ಕಡಿಮೆ ಅಂತರದಲ್ಲಿ ಹೆಚ್ಚು ಮಳೆ ಬೀಳುವುದರಿಂದ ಬೆಳೆ ನೆಲಕಚ್ಚುತ್ತಿದೆ. ಮಣ್ಣು ಪರೀಕ್ಷೆ, ಸುಣ್ಣ ಬಳಕೆ ಮಾಡಿರುವ ತೋಟದಲ್ಲಿ ಕೂಡ ಬೆಳೆ ಉದುರಿದೆ. ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದರು.

ಕೊಳೆ ರೋಗದಿಂದ ಬೆಳೆ ರಕ್ಷಣೆಗೆ ಬೋರ್ಡೋ ದ್ರಾವಣ ಸಿಂಪಡಣೆಗೆ ವಿಜ್ಞಾನಿಗಳು ಶಿಫಾರಸ್ಸು ಮಾಡುತ್ತಾರೆ. ಎಕರೆಗೆ ೬ ಸಾವಿರ ವೆಚ್ಚ ವಾಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಿಗೆ ಕಷ್ಟ. ಮಿಶ್ರಣದ ಔಷಧಗಳ ಧಾರಣೆ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು.

ಕೃಷಿಕ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ, ಪ್ರಕೃತಿ ಮುನಿಸು, ಕಾಫಿ ಬೆಳೆ ನಷ್ಟದ ಹಾದಿ ಹಿಡಿಯುವಂತಾಗಿದೆ. ಈಗಾಗಲೇ ಶೇ. ೬೦ ಕ್ಕೂ ಹೆಚ್ಚು ಬೆಳೆ ಉದುರಿರುವುದರಿಂದ ಗಿಡ ಫಲ ಭರಿತವಾಗಿ ಕಾಣುತ್ತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣ ಇನ್ನೂ ತಿಳಿದಿಲ್ಲ. ಶೋಚನೀಯ ಸ್ಥಿತಿಯಲ್ಲಿ ಬೆಳೆಗಾರರು ಇದ್ದಾರೆ ಎಂದರು.

ರಸಗೊಬ್ಬರದ ದರ ಹೆಚ್ಚಳ, ಕಾರ್ಮಿಕರ ಕೂಲಿ ಹೆಚ್ಚಳ, ಉತ್ಪಾದನೆ ವೆಚ್ಚ ಹೆಚ್ಚುತ್ತಿರುವ ಬೆನ್ನೆಲ್ಲೆ, ಕಾಫಿ ಉದುರುತ್ತಿರುವುದು ನೋವು ತಂದಿದೆ. ಕುಟ್ಟಂದಿ ಗ್ರಾಮದಲ್ಲಿ ೧ ಕಿಲೋಮೀಟರ್ ಅಂತರದಲ್ಲಿ ೨೦ ಇಂಚು ಮಳೆ ವ್ಯತ್ಯಾಸವಿರುತ್ತದೆ. ಹೀಗಿರುವಾಗ ತಾಲೂಕು ಆಧಾರ ದಲ್ಲಿ ಮಳೆ ಪ್ರಮಾಣ ಆಧಾರವಾಗಿಟ್ಟುಕೊಂಡು, ಬೆಳೆ ವಿಮೆ ನೀಡುವ ನಿಯಮ ವೈಜ್ಞಾನಿಕವಾಗಿಲ್ಲ. ಇದು ಕೃಷಿಕನಿಗೆ ಪ್ರೋತ್ಸಾಹ ನೀಡುವ ಯೋಜನೆ ಅಲ್ಲ ಎಂದು ಹೇಳಿದರು.

ಕೃಷಿಕ ಬಲ್ಯಮೀದೇರಿರ ಎನ್. ಸೋಮಣ್ಣ ಮಾತನಾಡಿ, ಬೆಟ್ಟದಿಂದ ಬರುವ ಕೂಳ ಹೊಗೆ ಕಾಫಿ ಬೆಳೆಗೆ ಮಾರಕವಾಗಿದೆ. ಬಿರುನಾಣಿ, ಬಾಡಗರಕೇರಿ, ತೆರಾಲು, ಬಿ. ಶೆಟ್ಟಿಗೇರಿ, ಕುಟ್ಟಂದಿ, ವಿ. ಬಾಡಗ ಗ್ರಾಮಗಳ ರೈತರು ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಗಾಳಿಯಿಂದ ಗಿಡ ರಕ್ಷಣೆ ಮಾಡಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ರೀತಿಯಲ್ಲಿ ಗ್ರಾಮಕ್ಕೆ ಅನುಸಾರವಾಗಿ ಪರಿಹಾರ ಕ್ರಮಕ್ಕೆ ಮುಂದಾಗಬೇಕೆಂದರು.

ಕೃಷಿಕ ಚೆಟ್ಟಂಗಡ ಮಹೇಶ್ ಮಂದಣ್ಣ ಮಾತನಾಡಿ, ತೆರಾಲು ಗ್ರಾಮ ವರ್ಷಂಪ್ರತಿ ಅತೀವೃಷ್ಟಿಗೆ ಒಳಗಾಗುತ್ತದೆ. ಕಾಫಿ ಹೂವು ಬಿಟ್ಟು ೨ ತಿಂಗಳ ಅವಧಿಯಲ್ಲಿ ಶೇ.೧೫ ರಿಂದ ೨೦ ಇಳುವರಿ ಮಾತ್ರ ಉಳಿಯುತ್ತಿದೆ. ಈ ಗ್ರಾಮದ ಕೃಷಿಕರ ಸ್ಥಿತಿ ಶೋಚನೀಯವಾಗಿದೆ. ಮಧ್ಯಮ ವರ್ಗದ ಬೆಳೆ ಸಾಲ ಮನ್ನಾ ಮಾಡುವುದು ಉತ್ತಮ ಎಂದರು.