ಗೋಣಿಕೊಪ್ಪ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಣ್ಣು ಪರೀಕ್ಷಾ ಅಭಿಯಾನದ ಫಲವಾಗಿ 2 ಕೋಟಿಗೂ ಹೆಚ್ಚಿನ ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಧಾರವಾಡ ಯುಎಎಚ್‌ಎಸ್ ಕುಲಪತಿ ಡಾ.ಎಂ.ಬಿ ಚೆಟ್ಟಿ ತಿಳಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಇಂಜಿನಿಯರಿಂಗ್ ದೃಷ್ಟಿಕೋನದಲ್ಲಿ ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕುರಿತ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಣ್ಣು ಪರೀಕ್ಷೆ ನಡೆದ ಮೇಲಿನ ಸಾಧಕ-ಬಾಧಕಗಳ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಮಣ್ಣು ಪರೀಕ್ಷೆಯ ನಂತರ ರೈತರು ಅನುಸರಿಸುತ್ತಿರುವ ಕ್ರಮಗಳ ಮಾಹಿತಿ ಸಂಗ್ರಹಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡುವ ದಿಕ್ಕಿನಲ್ಲಿ ಸಂಶೋಧನೆ ಕೈಗೊಂಡರೆ ಮಾತ್ರ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ಬಳಕೆಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಹೆಚ್ಚು ನೀರು ಬಳಸದಿರಿ: ದೇಶದಲ್ಲಿ ಕೃಷಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡುತ್ತಿರುವುದರಿಂದ ತಾತ್ಕಾಲಿಕವಾಗಿ ಉತ್ತಮ ಇಳುವರಿ ಪಡೆಯಬಹುದಾದರೂ, ಭವಿಷ್ಯದಲ್ಲಿ ಮಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬುವುದನ್ನು ಸಂಶೋಧನೆ ಮೂಲಕ ಅರಿತುಕೊಳ್ಳಬೇಕಿದೆ. ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರನ್ನು ಬಳಕೆ ಮಾಡಬೇಕು ಎಂಬ ಜಾಗೃತಿ ಅವಶ್ಯ ಎಂದರು.
ಉಪಗ್ರಹ ಆಧಾರಿತ ಹವಾಮಾನ ಮುನ್ಸೂಚನೆಯನ್ನು ಕೃಷಿ ಮತ್ತು ಅರಣ್ಯ ಸಂರಕ್ಷಣೆಯ ಕ್ಷೇತ್ರದಲ್ಲಿ ಬಳಕೆ ಮಾಡುವುದರಿಂದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಹೆಚ್ಚು ಫಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಯುಎಎಚ್‌ಎಸ್ ಮಂಡಳಿ ಸದಸ್ಯ ಡಾ.ವಿ.ವೀರಭದ್ರಯ್ಯ ಮಾತನಾಡಿ, ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಮಣ್ಣಿನ ಆರೋಗ್ಯದ ಪಾತ್ರ ಬಹಳ ಮುಖ್ಯವಾಗಿದೆ. ನೀರಿನ ಸೂಕ್ತ ಬಳಕೆ ಕೂಡ ಅವಶ್ಯಕವಾಗಿದೆ ಎಂದು ಹೇಳಿದರು.
ನಮ್ಮ ರಾಷ್ಟ್ರ ಅಹಾರ ಭದ್ರತಾ ಕಾಯ್ದೆ ಹೊಂದಿರುವ ಏಕೈಕ ರಾಷ್ಟ್ರವಾಗಿದ್ದರೂ, ಬಹಳಷ್ಟು ಜನರು ಅನೀಮಿಯಾದಿಂದ ಬಳಲುತ್ತಿರುವುದು ಕಂಡುಬಂದಿದೆ. ಇದಕ್ಕೆ ಹಸಿರು ಕ್ರಾಂತಿಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಎಸ್ ಶೋಭಾ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಪರಿಸರ ಹಾಗೂ ಕೃಷಿ ಮೇಲೆ ಆಗಿರುವ ಪರಿಣಾಮಗಳು ಹಾಗೂ ಭವಿಷ್ಯದಲ್ಲಿ ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾರ್ಯಾಗಾರದಿಂದ ಅರಿತುಕೊಳ್ಳಲು ಸಹಕಾರಿಯಾಗುತ್ತಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಚೆಪ್ಪುಡೀರ ಜಿ.ಕುಶಾಲಪ್ಪ, ಪ್ರೊ. ರಾಮಕೃಷ್ಣ ಹೆಗ್ಡೆ, ಪ್ರಗತಿಪರ ರೈತ ಎಂ.ಎಚ್.ಚಂದ್ರಪ್ಪ, ಧಾರವಾಡ ಯುಎಎಚ್‌ಎಸ್ ಅಲುಮ್ನಿ ಸದಸ್ಯ ಡಾ.ಎಂ.ಎಚ್.ಕೃಷ್ಣಮೂರ್ತಿ, ಕಾರ್ಯಾಗಾರ ಸಂಚಾಲಕ ಡಾ. ಜಿ.ಎಂ ದೇವಗಿರಿ ಇದ್ದರು.