ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಮೈಸೂರಮ್ಮ ನಗರದ ಮುಖ್ಯರಸ್ತೆ ಅಗಲೀಕರಣ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ರಾತ್ರಿ ಹೊತ್ತು ರಸ್ತೆ ಬದಿ ವಾಹನ ನಿಲುಗಡೆ ಮಾಢದ್ದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಅರ‌್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮ ನಗರದಲ್ಲಿ ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಕ್ಷೇತ್ರ ಸಂಚಾರದಲ್ಲಿ ಸ್ಥಳೀಯರು ತಮ್ಮ ವಾರ್ಡ್ ವ್ಯಾಪ್ತಿಯ ಸಮಸ್ಯೆ ತೆರೆದಿಟ್ಟರು.
ಗೋಣಿಕೊಪ್ಪ ಬೈಪಾಸ್ ರಸ್ತೆಯಿಂದ ಮೈಸೂರಮ್ಮ ನಗರಕ್ಕೆ ಸೇರುವ ರಸ್ತೆ ಕಿರಿದಾಗಿದೆ. ಹಗಲು ಮತ್ತು ರಾತ್ರಿ ಸ್ಥಳೀಯರೇ ರಸ್ತೆ ಬದಿ ವಾಹನ ನಿಲುಗಡೆ ಮಾಡುವುದರಿಂದ ತುರ್ತು ಸಮಯದಲ್ಲಿ ಎರಡು ವಾಹನ ತೆರಳಲು ಆಗುವುದಿಲ್ಲ. ರೋಗಿಗಳನ್ನು ಕರೆದುಕೊಂಡು ಹೋಗಲಾಗದೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗದಿರಲಿ. ಇದಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಬಳಸಿಕೊಂಡು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ರಸ್ತೆ ಅಭಿವೃದ್ಧಿಯಲ್ಲಿ ಉಳಿದುಕೊಂಡಿರುವ ಕಾಂಕ್ರಿಟ್ ರಸ್ತೆ ಅನುಷ್ಠಾನ ತುರ್ತಾಗಿ ಮಾಡಬೇಕೆಂದು ಜಗನಿವಾಸ್ ಒತ್ತಾಯಿಸಿ ದರು. ಡಾಂಬರೀಕರಣ ರಸ್ತೆ ಇರುವುದರಿಂದ ಹಳೆಯ ರಸ್ತೆ ಅಗೆಯಲು ಅದರದ್ದೇ ಆದ ನಿಯಮ ಇದೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ಕಳ್ಳಿಕಂಡ ನವೀನ್ ಪೊನ್ನಪ್ಪ ಭರವಸೆ ನೀಡಿದರು.
೧೫ ನೇ ಹಣಕಾಸು ಯೋಜನೆಯಡಿ ೩೭ ಲಕ್ಷ ರೂಪಾಯಿ ಮೊತ್ತಕ್ಕೆ ಕ್ರಿಯಾ ಯೋಜನೆ ಮಾಡಲಾಗಿದೆ. ೭ ಲಕ್ಷದಷ್ಟು ಅನುದಾನ ಕಡಿತ ಮಾಡಿರುವುದು ತೊಂದರೆಯಾಗಿದೆ. ಶೇ.೮೦ ರಷ್ಟು ತೆರಿಗೆ ಸಂಗ್ರಸಿದ್ದೇವೆ. ಅನುದಾನ ಕಡಿತ ಅಭಿವೃದ್ಧಿಗೆ ತೊಂದರೆ ಆಗಿದೆ ಎಂದು ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ ತಿಳಿಸಿದರು.
ಬಡಾವಣೆಗೆ ದೊಡ್ಡ ದೊಡ್ಡ ವಾಹನಗಳು ಬರುತ್ತವೆ. ಮುಖ್ಯರಸ್ತೆಯಿಂದ ಬಡಾವಣೆಗೆ ತೆರಳುವ ವಾಹನಗಳು ಚರಂಡಿಗೆ ಜಾರುತ್ತಿದೆ. ಇದರ ಪರಿಹಾರ ಮುಖ್ಯ ಎಂದು ಬೈರಂಡ ಭಾಗ್ಯ ಪೂಣಚ್ಚ ಮನವಿ ಮಾಡಿಕೊಂಡರು.
ಹಮೀದ್ ಮನೆ ಸಮೀಪ ಇರುವ ವಿದ್ಯುತ್ ಕಂಬ ಅಪಾಯದ ಸ್ಥಿತಿಯಲ್ಲಿದೆ. ಸ್ಥಳಾಂತರಕ್ಕೆ ಸೆಸ್ಕ್‌ಗೆ ಮಾಹಿತಿ ನೀಡುವ ಭರವಸೆ ನೀಡಿದರು. ಸತೀಶ್ ಅವರ ಮನೆ ಸಮೀಪದ ಗಿಡಗಳು ರಸ್ತೆಗೆ ಬೀಳುವುದರಿಂದ ರಸ್ತೆ ಕಿತ್ತು ಬರುತ್ತಿದೆ. ಗಿಡಗಳ ತೆರಗೆ ಪಂಚಾಯಿತಿಯಿಂದ ಸೂಚನೆ ನೀಡುವುದಾಗಿ ತಿಳಿಸಿದರು.
ಬಹುತೇಕ ಒಳಚರಂಡಿ ವ್ಯವಸ್ಥೆಗೆ ಚೇಂಬರ್ ಇಲ್ಲದ ಕಾರಣ ಕೊಳಚೆ ಹರಿಯದೆ ಸಮಸ್ಯೆಯಾಗಿರುವುದು ಕಂಡು ಬಂತು. ಮುತ್ತಪ್ಪ ದೇವಸ್ಥಾನ ಹತ್ತಿರ ಈ ಹಿಂದೆ ೧.೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ನೀರು ಹರಿಯುತ್ತಿಲ್ಲ. ಹಣ ಪೋಲಾಗಿದೆ ಎಂದು ಸ್ಥಳೀಯರು ದೂರಿದರು. ಇದರಿಂದ ರೋಗ ರುಜಿನ ಹೆಚ್ಚಾಗುತ್ತಿದೆ. ನೀರು ಹರಿಯುವಂತೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಲಾಯಿತು. ೨೫ ಕ್ಕೂ ಹೆಚ್ಚು ಕುಟುಂಬಕ್ಕೆ ಆಶ್ರಯ ಯೋಜನೆ ಮನೆ ಮಂಜೂರು ಆಗಿದ್ದರೂ ನಿವೇಶನ ಇಲ್ಲದೆ ಸಮಸ್ಯೆಯಾಗಿದೆ. ಸರ್ಕಾರ ನಿವೇಶನ ಕಲ್ಪಿಸಿದರೆ ಪ್ರಯೋಜನವಾಗುತ್ತದೆ ಎಂದು ಸದಸ್ಯರು ತಿಳಿಸಿದರು.
ಗ್ರೂಪ್ ರಚನೆ
ಸ್ಥಳೀಯ ಪ್ರತೀ ಸಮಸ್ಯೆಗೆ ಸ್ಪಂದಿಸಲು ವಾಟ್ಸ್‌ಆ್ಯಪ್ ಗ್ರೂಪ್ ಪ್ರಯೋಜನವಾಗುತ್ತಿದೆ. ಎಲ್ಲ ಸಮಸ್ಯೆ ಹಂಚಿಕೊಳ್ಳಲಾಗುತ್ತಿದೆ. ತಕ್ಷಣ ಪರಿಹಾರ ದೊರೆಯುತ್ತಿದೆ. ಇಲ್ಲಿನ ೪೦೦ ಕುಟುಂಬದೊಂದಿಗೆ ಪಂಚಾಯಿತಿ ಸದಸ್ಯರ ಹೊಂದಾಣಿಕೆ ಮೂಡಿಸಿದೆ.
**
ಮೈಸೂರಮ್ಮ ನಗರದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಕಾಡಾನೆ ಹಾವಳಿ ನಿಯಂತ್ರಿಸಲು ಆಗುತ್ತಿಲ್ಲ. ಅಂಗನವಾಡಿ ಸಮೀಪ ಕಾಡಾನೆಗಳು ಬರುವುದರಿಂದ ಮಕ್ಕಳಿಗೆ ಅಪಾಯವಾಗಬಾರದು. ಅರಣ್ಯ ಇಲಾಖೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಮನೆಯಪಂಡ ಸೋಮಣ್ಣ, ಅಧ್ಯಕ್ಷರು, ಅರ‌್ವತೊಕ್ಲು ಗ್ರಾಮ ಪಂಚಾಯಿತಿ.
**
ವಿದ್ಯುತ್ ಸಮಸ್ಯೆ ಶೇ. ೮೦ ರಷ್ಟು ಪರಿಹಾರ ಕಂಡಿದೆ. ಇದರಿಂದ ನಿರಂತರವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗಿದೆ. ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಯಿಂದ ತುಂಬಾ ತೊಂದರೆ ಆಗುತ್ತಿದೆ. ರಾತ್ರಿ ತುರ್ತು ಸಮಸ್ಯೆಯಾದಾಗ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕಳ್ಳಿಕಂಡ ನವೀನ್ ಪೊನ್ನಪ್ಪ, ಗ್ರಾಪಂ ಸದಸ್ಯರು.
**
೧೫ ಹಿರಿಯರಿಗೆ ಪಿಂಚಣಿ ದೊರೆಯುವಂತೆ ಮಾಡಿದ್ದೇವೆ. ೪ ಆಶ್ರಯ ಮನೆ ನಿರ್ಮಿಸಿದ್ದೇವೆ. ಮೂಲಭೂತ ಸಮಸ್ಯೆ ನೀಗಿಸಲು ಸ್ಥಳೀಯ ರೊಂದಿಗೆ ಕೈಜೋಡಿಸಿದ್ದೇವೆ. ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಸರ್ಕಾರದ ಸವಲತ್ತು ತಿಳಿಸುತ್ತಿದ್ದೇವೆ. ಸಮಸ್ಯೆ ಏನೆ ಇದ್ದರೂ ತಿಳಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಪಿ.ಎ. ಗಿರಿಜ, ಗ್ರಾಪಂ ಸದಸ್ಯರು.
**
ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿರುವ ಟ್ಯಾಂಕ್ ಮೂಲಕ ಪ್ರತಿ ನಿತ್ಯ ನೀರು ಸರಬರಾಜು ಮಾಡುತ್ತಿದ್ದೇವೆ. ಇದು ತುಂಬಾ ಪ್ರಯೋಜನವಾಗಿದೆ. ನೀರಿನ ಸಮಸ್ಯೆ ಇಲ್ಲ. ಸರ್ಕಾರದ ಅನುದಾನ ಮತ್ತಷ್ಟು ದೊರೆತರೆ ಅಭಿವೃದ್ದಿಗೆ ಪೂರಕವಾಗಲಿದೆ. ಮನೆಯಪಂಡ ಪ್ರಾಣ್ ಬೋಪಣ್ಣ, ಗ್ರಾಪಂ ಸದಸ್ಯರು.
**
ಕಾಡ್ಲಯ್ಯಪ್ಪ ದೇವಸ್ಥಾನ ಸಮೀಪ ಮೋರಿ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ರಸ್ತೆ ಬದಿಯ ಮರ ಕಡಿಯಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಮರದ ರೆಂಬೆ ಮುರಿದು ಬಿದ್ದರೆ ಅಪಾಯ ಸಂಭವಿಸಲಿದೆ. ವಿದ್ಯುತ್ ಸರಬರಾಜಿಗೂ ಅಡ್ಡಿಯಾಗ ಲಿದೆ. ಜಮ್ಮಡ ಸೌಮ್ಯ ಉಮೇಶ್, ಗ್ರಾಪಂ ಉಪಾಧ್ಯಕ್ಷೆ.
**
ಪೈಸಾರಿ ರಸ್ತೆಗೆ ಕಾಂಕ್ರಿಟ್, ಚರಂಡಿ ವ್ಯವಸ್ಥೆ ಆಗಬೇಕಿದೆ. ಆದರೆ, ಅನುದಾನ ಕೊರತೆ ಇದೆ. ಗೋಣಿಕೊಪ್ಪ ಬೈಪಾಸ್ ರಸ್ತೆಯಿಂದ ಮೈಸೂರಮ್ಮ ನಗರಕ್ಕೆ ತೆರಳುವ ರಸ್ತೆ ಕಾಂಕ್ರಿಟ್, ಚರಂಡಿ ನಿರ್ಮಿಸುವುದರಿಂದ ಪ್ರಯೋಜನವಾಗಲಿದೆ. ಎಸ್. ಮಹೇಶ್, ಗ್ರಾಪಂ ಸದಸ್ಯರು.