ದೇವನಹಳ್ಳಿ : ವಿಜಯಪುರ ಹೋಬಳಿಯ ಹುರುಳುಗುರ್ಕಿ, ಮುದುಗುರ್ಕಿ, ಹೊಸಹುಡ್ಯ, ಸಿಂಗವಾರ, ದೊಡ್ಡಸಾಗರಹಳ್ಳಿಗಳ ಹಲವಾರು ಜಮೀನಿನಲ್ಲಿ ಖಾಸಗಿ ಸಂಸ್ಥೆಯವರು ಗೋಮಾಳ, ಚೆಕ್ ಡ್ಯಾಂ ಒತ್ತುವರಿ ಮಾಡಿಕೊಂಡು ಕಟ್ಟಿರುವ ತಡೆಗೋಡೆ ತೆರವುಗೊಳಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ತಹಸೀಲ್ದಾರ್ ಅನಿಲ್ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಖಾಸಗಿ ಸಂಸ್ಥೆಯವರು ಗೋಮಾಳ ಕಬಳಿಸಿ, ರಾಜಕಾಲುವೆ ಮುಚ್ಚಿ, ಚೆಕ್ ಡ್ಯಾಂ ಕೆಡವಿ, ರೈತರ ಜಮೀನನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ಕಟ್ಟಿದ್ದಾರೆ. ತಕ್ಷಣವೇ ಪರಿಶೀಲಿಸಿ ತೆರವುಗೊಳಿಸಬೇಕೆಂದು ನಾಲ್ಕು ತಿಂಗಳಿಂದ ಮನವಿ ನೀಡಿದ್ದರೂ ಗಮನ ಹರಿಸುತ್ತಿಲ್ಲ ಎಂದು ರೈತ ಸಂಘದ ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ.ವಿನೋದ ಕುಮಾರ್ಗೌಡ ದೂರಿದರು.
ರಾಜಕಾಲುವೆ, ಬಂಡಿ ಜಾಡು, ಕಾಲುದಾರಿ, ಗೋಮಾಳ ಹಾಗೂ ಸರ್ಕಾರಕ್ಕೆ ಸಂಬಂಧಪಟ್ಟ ಇತರ ಜಾಗಗಳನ್ನು ಗುರುತಿಸಿ ಹಾಗೂ ಕಾಂಪೌಂಡ್ ಹಾಕುತ್ತಿರುವ ಜಾಗದ ಮಧ್ಯದಲ್ಲಿ ಅಥವಾ ಕಡೆಯ ಭಾಗದಲ್ಲಿ ಜಮೀನನ್ನು ಖಾಸಗಿ ಸಂಸ್ಥೆಯವರಿಗೆ ಕೊಡದೆ ರೈತರ ಜಮೀನುಗಳಿಗೆ ರಸ್ತೆ ಕಲ್ಪಿಸಿಕೊಡಬೇಕು. ಶೋಷಿತರಿಗೆ ನ್ಯಾಯ ನೀಡಬೇಕು. ಸಂಪೂರ್ಣ ಜವಾಬ್ದಾರಿಯನ್ನು ತಹಸೀಲ್ದಾರ್ ವಹಿಸಿಕೊಳ್ಳಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ರೈತರ ಸಂಘದಿಂದ ರಾಜ್ಯಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ರೈತ ಪ್ರತಿನಿಧಿಗಳು ಸೇರಿ ನೂರಾರು ರೈತರೂ ತಾಲೂಕು ಕಚೇರಿ ಮೇಲೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಅನಿಲ್ ಮಾತನಾಡಿ, ಅ.15ರಂದು ಸರ್ವೇ ಇಲಾಖೆಯ ಎಡಿಎಲ್ಆರ್ ಸರ್ವೇ ಅಧಿಕಾರಿ, ಕಂದಾಯ ಇಲಾಖಾ ಸಿಬ್ಬಂದಿ ಕರೆದುಕೊಂಡು ಬಂದು ಸರ್ವೇ ಮಾಡಿಸಿ ಒತ್ತ್ತುವರಿ ಮಾಡಿಕೊಂಡಿರುವವರ ಮೇಲೆೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.