ಹಾವೇರಿ: 2021ರ ಫೆಬ್ರವರಿ 26, 27 ಹಾಗೂ 28ರಂದು ನಗರದಲ್ಲಿ ಆಯೋಜಿಸಲು ಉದ್ದೇಶಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ಅಂತಿಮಗೊಳಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ನೇತೃತ್ವದ ತಂಡವು ನಗರದ ಪಿಬಿ ರಸ್ತೆಯ ಸುವರ್ಣಕಾರರ ಸಂಘದ ಖಾಲಿ ನಿವೇಶನವನ್ನು ಶನಿವಾರ ಪರಿಶೀಲಿಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮನು ಬಳಿಗಾರ, ‘20 ಎಕರೆಯಷ್ಟು ಖಾಲಿ ನಿವೇಶನ ಹಾಗೂ ಇದರ ಪಕ್ಕದಲ್ಲಿ 6ರಿಂದ 8 ಎಕರೆಯಷ್ಟು ರೈತರ ಜಮೀನುಗಳಿವೆ. ಇದನ್ನು ಕೊಡುವುದಾಗಿ ರೈತರು ತಿಳಿಸಿದ್ದಾರೆ. ಹೀಗಾಗಿ, ಇದು ವಿಶಾಲ ಜಾಗವಾಗಲಿದ್ದು, ಸಮ್ಮೇಳನದ ಪ್ರಧಾನ ವೇದಿಕೆಯನ್ನು ಇಲ್ಲಿಯೇ ನಿರ್ವಿುಸಲು ಸೂಕ್ತವಾಗಿದೆ. ಈಗಾಗಲೇ ಈ ಸ್ಥಳವನ್ನು ಜಿಲ್ಲಾಧಿಕಾರಿ ವೀಕ್ಷಿಸಿದ್ದಾರೆ. ಇದು ಸಮ್ಮೇಳನ ಆಯೋಜನೆಗೆ ಸೂಕ್ತವಾಗಿರುವುದರಿಂದ ಇದನ್ನೇ ಅಂತಿಮಗೊಳಿಸಲಾಗುವುದು’ ಎಂದರು.
ಈ ಸ್ಥಳದಲ್ಲಿಯೇ ಪುಸ್ತಕ, ವಾಣಿಜ್ಯ ಮಳಿಗೆಗಳ ನಿರ್ವಣ, ವಿಐಪಿ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ವಾಹನಗಳ ನಿಲುಗಡೆಗೂ ಅಕ್ಕಪಕ್ಕದಲ್ಲಿ ಕಾಲೇಜ್ ಮೈದಾನಗಳಿವೆ. ಗೋಷ್ಠಿಗಳ ಆಯೋಜನೆಗೆ ಒಂದು ಸಮಾನಾಂತರ ವೇದಿಕೆ ಮಾಡಬೇಕಿದ್ದು, ಇದನ್ನು ನೊಳಂಬ ಸಮುದಾಯ ಭವನದಲ್ಲಿ ಮಾಡಲಾಗುವುದು ಎಂದರು.
ಸಮ್ಮೇಳನಕ್ಕೆ 15 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಹಾಗೂ ಸಾಹಿತಿಗಳಿಗೆ, ಗಣ್ಯರಿಗೆ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಹಾವೇರಿ ನಗರದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ಹೋಟೆಲ್ಗಳು, ಸಮುದಾಯ ಭವನ, ವಿವಿಧ ವಸತಿ ನಿಲಯಗಳನ್ನು ಗುರುತಿಸುವ ಕೆಲಸ ನಡೆದಿದೆ. ಇದು ಸಾಲದಿದ್ದರೆ ದಾವಣಗೆರೆ, ಹುಬ್ಬಳ್ಳಿ, ರಾಣೆಬೆನ್ನೂರಲ್ಲಿ ವಸತಿ ವ್ಯವಸ್ಥೆಗೆ ಹೋಟೆಲ್ಗಳನ್ನು ಗುರುತಿಸಲಾಗುವುದು. ಈಗಾಗಲೇ ಸ್ಥಳೀಯ ಹೋಟೆಲ್ಗಳಲ್ಲಿ ಶೇ. 75ರಷ್ಟು ರೂಮ್ಳನ್ನು ನಮಗೆ ಕೊಡಲು ಕೇಳಿದಾಗ ಅವರು ಪೂರ್ತಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಮ್ಮೇಳನದ ವಿವಿಧ ಸಮಿತಿಗಳನ್ನು ಶೀಘ್ರದಲ್ಲಿಯೇ ರಚಿಸಲಾಗುವುದು. ನಾನು ಸಹ ಬೆಂಗಳೂರಿನಿಂದ ಜಿಲ್ಲೆಗೆ ಪ್ರತಿ 15 ದಿನಕ್ಕೊಮ್ಮೆ ಬಂದು ಎಲ್ಲ ಸಿದ್ಧತೆಗಳನ್ನು ಪರಿಶೀಲಿಸುತ್ತೇನೆ. ಸಮ್ಮೇಳನ ನಡೆಸಲು ಜಿಲ್ಲಾಡಳಿತ, ಸಚಿವರು, ಜನರು ಉತ್ಸುಕರಾಗಿದ್ದು, ಕರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಿಗದಿತ ದಿನಾಂಕಕ್ಕೆ ಸಮ್ಮೇಳನ ಆಯೋಜಿಸುವ ವಿಶ್ವಾಸದೊಂದಿಗೆ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಈಗಾಗಲೇ ನಗರದ ಅಕ್ಕಪಕ್ಕದ ವಸತಿ ನಿಲಯ, ಹೋಟೆಲ್, ಸಮುದಾಯ ಭವನಗಳಲ್ಲಿನ ರೂಮ್ಳ ಸಂಖ್ಯೆಯನ್ನು ಕಲೆಹಾಕಿದ್ದೇವೆ. ಕಾಗಿನೆಲೆ ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಿದ್ದು, ಅಲ್ಲಿಯೂ ವಸತಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್. ಬೇವಿನಮರದ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ, ಸುರೇಶ ಉದ್ಯೋಗಣ್ಣನವರ ಇತರರಿದ್ದರು.