ಶ್ರೀ ವೆಂಕಟರಮಣ ದೇವಸ್ಥಾನದ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ಪುರಪ್ರವೇಶ ಶುಕ್ರವಾರ ನೆರವೇರಿತು. 
ಜಿಲ್ಲೆ

ವೆಂಕಟರಮಣ ದೇವಸ್ಥಾನಕ್ಕೆ ಸ್ವರ್ಣ ಲಾಲ್ಕಿ ಪುರಪ್ರವೇಶ

ಮಂಗಳೂರು: ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿಯ ಪುರಪ್ರವೇಶ ಶುಕ್ರವಾರ ಸಂಘನಿಕೇತನದಿಂದ ಪ್ರಾರಂಭಗೊಂಡು ಮಣ್ಣಗುಡ್ಡ, ಕುದ್ರೋಳಿ, ರಥಬೀದಿ ಮೂಲಕ ದೇವಳಕ್ಕೆ ವಿಜೃಂಭಣೆಯಿಂದ ನಡೆಯಿತು. 35 ಕೆ.ಜಿ.ಬಂಗಾರ, 70 ಕೆ.ಜಿ.ಬೆಳ್ಳಿಯಿಂದ ನಿರ್ಮಾಣ ಮಾಡಲಾದ ಈ ಸ್ವರ್ಣ ಪಲ್ಲಕ್ಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ಸಮರ್ಪಿಸಲಾಗುವುದು. ಈ ಸ್ವರ್ಣ ಲಾಲ್ಕಿಯನ್ನು ಸೇವಾ ರೂಪದಲ್ಲಿ ದಾನಿ ಡಾ.ಪಿ.ದಯಾನಂದ ಪೈ ಕುಟುಂಬಸ್ಥರು ಹಾಗೂ ಹತ್ತು ಸಮಸ್ತರ ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ಸಮರ್ಪಿಸಲಾಗಿದೆ. ಡಾ.ಪಿ.ದಯಾನಂದ ಪೈ, ಮೋಹಿನಿ ದಯಾನಂದ ಪೈ, ದೇವಳ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ.ಗಣೇಶ್ ಕಾಮತ್, ಎಂ.ಜಗನ್ನಾಥ್ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶೀನಾಥ್ ಆಚಾರ್ಯ, ಉದ್ಯಮಿ ಸುರೇಶ ವಿ.ಕಾಮತ್, ಶಾಸಕ ಡಿ.ವೇದವ್ಯಾಸ್ ಕಾಮತ್ ಮೊದಲಾದವರು ಪಾಲ್ಗೊಂಡರು.