ಜಿಲ್ಲೆ

ಶಿಕ್ಷಕರು ಸಪ್ತ ಆಯಾಮದಲ್ಲಿ ಸವಾಲು ಸ್ವೀಕರಿಸಲಿ: ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಉತ್ತಮ ಶಿಕ್ಷಕ ವಿದ್ಯಾರ್ಥಿಯ ಪಾಲಿಗೆ ಒಬ್ಬ ಉತ್ತಮ ಪ್ರವಾದಿ, ಕಲಾಕಾರ, ಬಿಲ್ಡರ್, ಗೆಳೆಯ, ನಾಗರಿಕ, ಪ್ರವರ್ತಕ ಮತ್ತು ನಂಬಿಕಸ್ಥನಾಗಿ ಕರ್ತವ್ಯ ನಿರ್ವಹಿಸಬೇಕು. ಸಪ್ತ ಆಯಾಮಗಳ ಈ ಸವಾಲನ್ನು ಸ್ವೀಕರಿಸಿ ಕರ್ತವ್ಯ ನಿರ್ವಹಿಸಿದಾಗ ಸಿಗುವ ಗೌರವಕ್ಕಿಂತ ಮಿಗಿಲಾದುದು ಇನ್ನೇನು ಇರುವುದಿಲ್ಲ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯಕ್ಕೆ 50 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮ ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದ ಅವರು, ಒಬ್ಬ ವ್ಯಕ್ತಿ ಉತ್ತಮ ಶಿಕ್ಷಕನಾಗಬೇಕಾದರೆ ಸಪ್ತ ಆಯಾಮಗಳಲ್ಲಿ ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು. ಕಲಿಯಲು ಆಸಕ್ತಿಯುಳ್ಳವನು ಮಾತ್ರ ಕಲಿಸಲು ಯೋಗ್ಯನು. ಶಿಕ್ಷಕನಿಗೆ ವಾಸ್ತವದ ಪ್ರಯೋಗಾತ್ಮಕ ಬಗ್ಗೆ ಭಯ ಇರಬಾರದು. ಆತ ಜ್ಞಾನದಾಹಿಯಾಗಿರಬೇಕು. ನಿರಂತರ ವಿದ್ಯಾರ್ಥಿ ಆಗಿರಬೇಕು. ತಂದೆ ತಾಯಿ ಮಗುವಿಗೆ ಜನ್ಮ ನೀಡಿದರೆ, ಕಲಿಸುವ ಶಿಕ್ಷಕ ವಿದ್ಯಾರ್ಥಿಯು ಪರಂಪರೆಯ ಭಾಗವಾಗಿ ಪ್ರಜ್ವಲಿಸುವಂತೆ ಮಾಡಿದರೆ ಎರಡನೇ ಜನ್ಮ ನೀಡಿದಂತಾಗುತ್ತದೆ ಎಂದರು.

ಶಿಕ್ಷಕ ತನ್ನ ವೃತ್ತಿಯನ್ನು, ತಾನು ಬೋಧಿಸುವ ವಿಷಯವನ್ನು ಮತ್ತು ತನ್ನ ಮುಂದೆ ಕುಳಿತುಕೊಳ್ಳುವ ಮಕ್ಕಳನ್ನು ತನ್ನ ಸ್ವಂತ ಮಕ್ಕಳು ಎಂದು ಭಾವಿಸಿದಾಗ ತನ್ನ ಮತ್ತು ಶಿಕ್ಷಣದ ತಾಕತ್ತನ್ನು ಜಗತ್ತಿಗೆ ತೋರಿಸಬಹುದು. ಒಂದು ಉತ್ತಮ ಶಾಲೆ ತೆರೆದರೆ ನೂರು ಸೆರೆಮನೆಗಳನ್ನು ತೆರೆಯುವುದನ್ನು ತಪ್ಪಿಸಬಹುದು. ಮನುಷ್ಯ ಒಬ್ಬ ಸಮಾಜ ಜೀವಿ, ರಾಜಕೀಯ ಜೀವಿ, ಆರ್ಥಿಕ ಜೀವಿ, ಲೈಂಗಿಕತೆಯ ಜೀವಿ ಮತ್ತು ಆಧ್ಯಾತ್ಮಿಕ ಜೀವಿಯಾಗಿದ್ದಾನೆ. ಯಂತ್ರಗಳನ್ನು ತಯಾರಿಸುವ ಶಕ್ತಿ ಹೊಂದಿ ಭೌತಿಕ ಸುಧಾರಣೆಯ ಮೂಲಕ ಜೀವಿಸುತ್ತಿದ್ದರೂ ಅಂತರಂಗದಲ್ಲಿ ಶಾಂತಿ ಸುಖ ಸಮಾಧಾನ ಪಡೆದುಕೊಳ್ಳಲು ತಿಣುಕಾಡುತ್ತಿದ್ದಾನೆ. ನಿಜವಾದ ಅರ್ಥದಲ್ಲಿ ಶಿಕ್ಷಣ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಕಳೆದ 50 ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಹಲವು ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದಿರುವುದಲ್ಲದೆ ವಿವಿಧ ಇಲಾಖೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವುದು ಸಂಸ್ಥೆಗೆ ಗೌರವ ತಂದು ಕೊಟ್ಟಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲೆ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ವಿ.ಡಿ.ಸುವರ್ಣ, ನಿವೃತ್ತ ಪ್ರಾಂಶುಪಾಲರಾದ ಯಶೋಧರಾ, ಜಯಪ್ರಕಾಶ್, ವಿ.ಕೆ.ಕೃಷ್ಣಪ್ಪ, ಸಂಘದ ಉಪಾಧ್ಯಕ್ಷ ಟಿ.ಎನ್.ರಕ್ಷಿತ್‌ರಾಜ್, ಖಜಾಂಚಿ ಎಂ.ಎಲ್.ಸುನೀಲ್ಕುಮಾರ್, ಕಾರ್ಯದರ್ಶಿ ಎಸ್.ಅರ್ಪಿತಾ, ಲೋಕೇಶ್, ಜಯಶಂಕರ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಬಗ್ಗೆ ತಮ್ಮ ಅನಿಸಿಕೆ ಮಂಡಿಸಿದರು. ನಿವೃತ್ತ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಯಿತು. ಶ್ರೀನಿವಾಸ್, ರಾಘವೇಂದ್ರ ಹಡಪದ ನೇತೃತ್ವದಲ್ಲಿ ’ಸತ್ಯಾವತಾರ ರೂಪಕ, ಭರತನಾಟ್ಯ, ಸ್ವಾಗತ ಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ 500ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತ ಮತ್ತು ಕಲಾ ತಂಡದೊಂದಿಗೆ ವೇದಿಕೆಗೆ ಕರೆತರಲಾಯಿತು. ನಿತ್ಯ ಸಚಿವ ಕೆ.ವಿ.ಶಂಕರಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.