ಜಿಲ್ಲೆ

ಸುವರ್ಣ ಮಹೋತ್ಸವ ಸಮಾರಂಭ 6ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿ ಸುವರ್ಣ ಮಹೋತ್ಸವ ನಿಮಿತ್ತ ಅ. 6, 7ರಂದು ಜೆಎಸ್‌ಎಸ್ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 6ರಂದು ಬೆಳಗ್ಗೆ 10 ಗಂಟೆಗೆ ಜೆಎಸ್‌ಎಸ್ ಕ್ರೀಡಾಂಗಣದ ಡಾ. ನ. ವಜ್ರಕುಮಾರ ವೇದಿಕೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾರಂಭ ಉದ್ಘಾಟಿಸುವರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೂರುಸಾವಿರ ಮಠದ ಶ್ರೀ ಗುರುರಾಜಯೋಗೀಂದ್ರ ಸ್ವಾಮೀಜಿ, ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಶುಭಾಶೀರ್ವಚನ ನೀಡುವರು. ಮಗಳಿಗೊಂದು ಪತ್ರ ಕೃತಿಯನ್ನು ಟ್ರಸ್ಟಿ ಹೇಮಾವತಿ ಹೆಗ್ಗಡೆ, ಅಂತರಂಗ ಕೃತಿಯನ್ನು ಆಡಳಿತ ಮಂಡಳಿ ಸದಸ್ಯ ಡಿ. ಸುರೇಂದ್ರಕುಮಾರ, ಸ್ಮರಣ ಸಂಚಿಕೆಯನ್ನು ಸಮಿತಿ ಉಪ ಕಾರ್ಯಾಧ್ಯಕ್ಷ ಡಾ. ಎಂ.ಎನ್. ತಾವರಗೇರಿ ಬಿಡುಗಡೆ ಮಾಡುವರು. ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಗಮಿಸುವರು. ಸುಮನ ವಜ್ರಕುಮಾರ ಹಾಗೂ ಆನಂದ ತಾಳಿಕೋಟಿ ಉಪಸ್ಥಿತರಿರುವರು. ಸಂಜೆ 5ಗಂಟೆಗೆ ಹಿರೇಮಗಳೂರು ಕಣ್ಣನ್ ಹಾಗೂ ನಾಗಶ್ರೀ ತ್ಯಾಗರಾಜ್ ಅವರಿಂದ ಮಾತಿನ ಜುಗಲ್ ಬಂದಿ ನಡೆಯಲಿದೆ. ಬಳಿಕ ಅಂತರ್ ರಾಷ್ಟ್ರೀಯ ನೃತ್ಯ ತಂಡಗಳಿಂದ ನೃತ್ಯ ಪ್ರರ್ದನ ಏರ್ಪಡಿಸಲಾಗಿದೆ ಎಂದರು.
ಅ. 7ರಂದು ಬೆಳಗ್ಗೆ 10 ಗಂಟೆಗೆ 50ರ ಅವಿಸ್ಮರಣೀಯ ಸಮಾರಂಭ ನಡೆಯಲಿದ್ದು, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸೊಂದೆಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶುಭಾಶೀರ್ವಚನ ನೀಡುವರು. ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಚೆನ್ನುಡಿ ಭಾಗ-6 ಅನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಚೆನ್ನುಡಿ ಭಾಗ-7 ಅನ್ನು ಸಚಿವ ಎಚ್.ಕೆ. ಪಾಟೀಲ ಬಿಡುಗಡೆ ಮಾಡುವರು. ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಇತರರು ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಗಾಯಕ ವಿಜಯ ಪ್ರಕಾಶ ಹಾಗೂ ತಂಡದಿಂದ ಸಂಗೀತ ರಸ ಸಂಜೆ ನೆರವೇರಲಿದೆ ಎಂದರು.
ಜೆಎಸ್‌ಎಸ್ ಸಂಸ್ಥೆ ಹಳೇ ಬೇರಿನೊಂದಿಗೆ 24 ಅಂಗ ಸಂಸ್ಥೆಗಳೊಂದಿಗೆ ಹೊಸ ಚಿಗುರಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ತಂತ್ರಜ್ಞಾನದ ಬಳಕೆ, ಮಹೋನ್ನತ ಕಟ್ಟಡಗಳು, ಅನಿಭವಿ ಶಿಕ್ಷಕರು, ಬೃಹತ್ ಗ್ರಂಥಾಲಯ, ಸ್ವಚ್ಛ ಹಸುರಿನ ಆವರಣದಲ್ಲಿ ಎಲ್‌ಕೆಜಿಯಿಂದ ಪಿಜಿ ಹಾಗೂ ಪಿಎಚ್.ಡಿ ವರೆಗೂ 4 ಕ್ಯಾಂಪಸ್‌ಗಳಲ್ಲಿ ಈ ಸುಮಾರು 22,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.