ಜಿಲ್ಲೆ

ಧರ್ಮದ ಹಾದಿಯಲ್ಲಿಲ್ಲ ವಿವಿಧ ಆಯ್ಕೆ...

ವಿದ್ಯಾಸಾಗರ ತೀರ್ಥ ಶ್ರೀಪಾದರ ಆಶೀರ್ವಚನ

ಅಗ್ರಹಾರ ನಾರಾಯಣ ತಂತ್ರಿಗಳ ಸುವರ್ಣ ಸಂಸ್ಕರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲರಿಗೂ ಸುಲಭವಾಗಿ ಅರಗಿಸಿಕೊಳ್ಳಲಾಗದ ಸಂಸ್ಕೃತ ಭಾಷೆಯಲ್ಲಿರುವ ತತ್ತ್ವಶಾಸ್ತ್ರಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಪ್ರಥಮತರ ಸಾಲಿನಲ್ಲಿ ಅಗ್ರಹಾರ ನಾರಾಯಣ ತಂತ್ರಿಗಳು ಅಗ್ರಗಣ್ಯರು. ಅಧರ್ಮದ ಹಾದಿಯಲ್ಲಿರುವಂತೆ ಧರ್ಮದ ಹಾದಿಯಲ್ಲಿ ಆಯ್ಕೆಗಳಿಲ್ಲ. ಅದರಂತೆ ತಮ್ಮ ಜೀವನವನ್ನೇ ತತ್ತ್ವಶಾಸ್ತ್ರವನ್ನು ಕನ್ನಡಕ್ಕೆ ಅನುವಾದಿಸಲು ಮೀಸಲಿಟ್ಟಿದ್ದ ಅವರು, ಕೊನೆಯುಸಿರು ತನಕವೂ ಆಚಾರವಂತರಾಗಿಯೇ ಇದ್ದರು. ಜೀವನದ ನಂತರವೂ ಸ್ಮರಣಾರ್ಹರಾದ ತಂತ್ರಿಗಳು ವಿದ್ವಾಂಸರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಥಬೀದಿಯಲ್ಲಿರುವ ಶ್ರೀಕೃಷ್ಣ ಸಭಾಭವನದಲ್ಲಿ ಅಗ್ರಹಾರ ನಾರಾಯಣ ತಂತ್ರಿ ಟ್ರಸ್ಟ್​ ಬೆಂಗಳೂರು ವತಿಯಿಂದ ಅಗ್ರಹಾರ ನಾರಾಯಣ ತಂತ್ರಿ ಅವರ ಸಂಸ್ಮರಣೆ ನಿಮಿತ್ತ ಜುಲೈ 26ರಂದು ಸಂಜೆ ಆಯೋಜಿಸಿದ್ದ ಸುವರ್ಣ ಸಂಸ್ಕರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿದ್ವಾಂಸರಿಗೆ ಸನ್ಮಾನ

ನಾರಾಯಣ ತಂತ್ರಿ ಸಂಸ್ಮರಣೆ ನಿಮಿತ್ತ ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾಲಯದ ವಿದ್ವಾನ್​ ಆನಂದ ತೀರ್ಥಾಚಾರ್ಯ ನಾಗಸಂಪಿಗೆ, ವಿದ್ವಾಂಸ ರಾಮ ವಿಠ್ಠಲಾಚಾರ್ಯ ಬೆಂಗಳೂರು, ಪೂರ್ಣಪ್ರಜ್ಞ ವಿದ್ಯಾಲಯ ಬೆಂಗಳೂರಿನ ಪ್ರಾಂಶುಪಾಲ ಡಾ. ಎಚ್​.ಎಸ್​. ಸತ್ಯನಾರಾಯಣ ಆಚಾರ್ಯ ಹಾಗೂ ಬೆಂಗಳೂರು ಸಂಸ್ಕೃತ ಕಾಲೇಜಿನ ಉಪನ್ಯಾಸಕ ಡಾ. ರಾಜಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಹ್ಲಾದ ಬಾಯರಿ, ನಿರಂಜನ ಆಚಾರ್ಯ, ನಾಗರಾಜ ತಂತ್ರಿ ಹಾಗೂ ವಿಷ್ಣುಮೂರ್ತಿ ಆಚಾರ್ಯ ಪರಿಚಯಿಸಿದರು.

ಪುಸ್ತಕ ಬಿಡುಗಡೆ

ಎ.ರಘುಪತಿ ತಂತ್ರಿ ವಿರಚಿತ ಭಾಗವತ ಸಾರ ಹಾಗೂ ಧ್ಯಾನ ಮತ್ತು ಭಕ್ತಿಯೋಗ ಎಂಬ ಎರಡು ಪುಸ್ತಕವನ್ನು ಕೃಷ್ಣಾಪುರ ಶ್ರೀ ಬಿಡುಗಡೆ ಮಾಡಿದರು. ಸಂಸ್ಕೃತ ಭಾಷೆಯ ಆರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಪೂರ್ಣಪ್ರಜ್ಞ ತಂತ್ರಿ ವೇದ ಘೋಷ ಪಠಿಸಿದರು. ಬಾಲರಾಜ ತಂತ್ರಿ ಸ್ವಾಗತಿಸಿದರು. ಎ.ರಘುಪತಿ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಂದೆಯ ವಿಶೇಷತೆ ಹಾಗೂ ಸಾಧನೆಗಳ ಕುರಿತಾಗಿ ಮಾಹಿತಿ ನೀಡಿದರು. ವೀಣಾ ಆಚಾರ್ಯ ಅಭಿನಂದನಾ ನುಡಿಯಾಡಿದರು. ಹೆರ್ಗ ಹರಿಪ್ರಸಾದ ಭಟ್​ ಕಾರ್ಯಕ್ರಮ ನಿರೂಪಿಸಿದರು.