ಜಿಲ್ಲೆ

ಒಂದು ಕೆಜಿ ಚಿನ್ನಾಭರಣ ಸಹಿತ ಇಬ್ಬರು ಆರೋಪಿಗಳ ಬಂಧನ

ಹರೀಶ ಎಂ.

ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿ 1 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಕಾರ್ಕಳ ತಾಲೂಕು ಮಾಳ ಮಲ್ಲಾರ್, ದರ್ಖಾಸು ನಿವಾಸಿ ಗಣೇಶ್ ನಾಯ್ಕ (26), ವಿರಾಜಪೇಟೆ ತಾಲೂಕು ಹಳೇ ಸಿದ್ದಾಪುರ ಗುಯ್ಯ ಗ್ರಾಮದ ರಂಜಿತ್ ಕೆ.ಆರ್. (26) ಬಂಧಿತರು. ಕಳವಾದ ವಿವಿಧ ನಮೂನೆಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪ್ರಕರಣದ ವಿವರ: ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ ಅವರ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳವುಗೈದಿದ್ದರು. 2023 ಜ.15 ಸಂಜೆ 6.30ರಿಂದ ಮರುದಿನ ಬೆಳಗ್ಗೆ 9 ಗಂಟೆ ನಡುವೆ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ವಾಚ್‌ಮೆನ್‌ಗಳು ಹಿಂಭಾಗದ ಕಟ್ಟಡದಲ್ಲಿ ಮಲಗಿದ್ದರು. ಅವರಿಗೆ ಕಳವು ನಡೆಯುವಾಗ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ನಗರ ಅಪರಾಧ ಪತ್ತೆದಳ (ಸಿಸಿಬಿ) ಕ್ಕೆ ಹಸ್ತಾಂತರಿಸಲಾಗಿತ್ತು.

ಕ್ಲಿಷ್ಟಕರ ಪ್ರಕರಣ: ಅತ್ಯಂತ ಕ್ಲಿಷ್ಟಕರ ಹಾಗೂ ಯಾವುದೇ ಸುಳಿವು ಇಲ್ಲದ ಈ ಕಳವು ಪ್ರಕರಣದ ತನಿಖೆಯನ್ನು ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ ಚಾಣಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದಾರೆ.
ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 55 ಲಕ್ಷ ಆಗಬಹುದು. ಅಲ್ಲದೇ ಆರೋಪಿಗಳ ವಶದಿಂದ 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 56,50,000 ರೂ. ಆಗಬಹುದು. ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.


ಹಳೇ ಆರೋಪಿಗಳು: ಈ ಆರೋಪಿಗಳ ಪೈಕಿ ಗಣೇಶ್ ನಾಯ್ಕ ಹಾಗೂ ಇತರ ಇಬ್ಬರು ಆರೋಪಿಗಳು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳರಾಯಿ ಚರ್ಚ್ ರಸ್ತೆಯಲ್ಲಿನ ಮನೆಯೊಂದರ ಬಾಗಿಲಿನ ಬೀಗವನ್ನು ಒಡೆದು ಮನೆಯಲ್ಲಿನ ಬೆಲೆಬಾಳುವ ಸೊತ್ತುಗಳನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ಕಳವುಗೈದ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪ್ರಕರಣವು ಕೂಡಾ ಪತ್ತೆಯಾಗಿದೆ. ಗಣೇಶ್ ನಾಯ್ಕ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.


ಪೊಲೀಸ್ ತಂಡ ಈ ಕಳವು ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್‌ಐಯವರಾದ ರಾಜೇಂದ್ರ ಬಿ., ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ಎಎಸ್‌ಐಯವರಾದ ಶಶಿಧರ ಶೆಟ್ಟಿ, ಹರೀಶ್ ಪದವಿನಂಗಡಿ,ಮೋಹನ್ ಕೆ.ವಿ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


10 ಸಾವಿರ ರೂ. ಬಹುಮಾನ: ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತರು 10 ಸಾವಿರ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್, ಎಸಿಪಿ ಪಿ.ಎ. ಹೆಗಡೆ ಉಪಸ್ಥಿತರಿದ್ದರು.