ಜಿಲ್ಲೆ

ಮೈಮೇಲೆ ಚಿನ್ನದ ಪೌಡರ್ ಮೆತ್ತಿಕೊಂಡಿದ್ದವ ಮಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಬಲೆಗೆ

reportermng

ಮಂಗಳೂರು: ಚಿನ್ನಕಳ್ಳಸಾಗಣೆಗೆ ಖದೀಮರು ನೂರೆಂಟು ದಾರಿ ಕಂಡುಕೊಳ್ಳುತ್ತಾರೆ. ಈತನ ದಾರಿ ಕೊಂಚ ಡಿಫರೆಂಟ್​. ಮೈ ಮೇಲೆ ಚಿನ್ನದ ಪೌಡರ್ ಮೆತ್ತಿಕೊಂಡು ದುಬೈನಿಂದ ಬಂದಿದ್ದ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಲೇ ಕಸ್ಟಮ್ಸ್ ಬಲೆ ಬಿದ್ದ ಕೂಡ!

ಬಂಧಿತನನ್ನು ಮಂಗಳೂರಿನ ಅಬೂಬಕರ್​ ಸಿದ್ಧಿಕ್ ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಸ್ಪೈಸ್ ಜೆಟ್ SG 146 ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಈತನ ನಡವಳಿಕೆ ಮೇಲೆ ಸಂದೇಹ ಪಟ್ಟ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಮೈ ಮೇಲೆ ಚಿನ್ನದ ಪೌಡರ್ ಪತ್ತೆಯಾಗಿತ್ತು.

ಅದನ್ನು ಒಗ್ಗೂಡಿಸಿ ಪರಿಶೀಲಿಸಿದಾಗ ಅದು 24 ಕ್ಯಾರೆಟ್ ಚಿನ್ನ ಎಂಬುದು ಖಾತ್ರಿಯಾಗಿತ್ತು. ಅಲ್ಲದೆ, ತೂಕ 634 ಗ್ರಾಂ ಇತ್ತು. ಇದರ ಮೌಲ್ಯ 32,96,800 ರೂಪಾಯಿ ಎಂದು ಅಂದಾಜಿಸಲಾಗಿದೆ.