ಜಿಲ್ಲೆ

ಬುದ್ದಿಮಾತು ಹೇಳಿ ಚಿನ್ನಾಭರಣ, ನಗದು ಎಗರಿಸಿದ!

Dakshina Kannada

ಕಾರ್ಕಳ: ಮದ್ಯ ಸೇವಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬುದ್ದಿಮಾತು ಹೇಳಿದ ಅಪರಿಚಿತನೊಬ್ಬ ತನ್ನ ಚಾಕಚಕ್ಯತೆ ತೋರಿಸಿ ಚಿನ್ನಾಭರಣ, ನಗದು ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ರೆಂಜಾಳ ಕಡಂಬಾಕ್ಯಾರ್ ನಿವಾಸಿ ಸುಧಾಕರ ಶೆಟ್ಟಿ(60) ದೂರುದಾರರು. ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿದ್ದ ಅವರು ಜ.4ರಂದು ಬೆಂಗಳೂರಿನಿಂದ ಪೂಜಾ ಕಾರ್ಯಕ್ರಮಕ್ಕೆಂದು ಊರಿಗೆ ಬಂದಿದ್ದರು. ಜ.5ರ ರಾತ್ರಿ ಬೆಂಗಳೂರಿಗೆಂದು ಮನೆಯಿಂದ ಹೊರಟಿದ್ದ ಅವರು ಕಾರ್ಕಳದ ಬಾರ್‌ನಲ್ಲಿ ಮದ್ಯ ಸೇವಿಸಿ ಬಸ್ ನಿಲ್ದಾಣ ಕಡೆ ಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಸನಿಹಕ್ಕೆ ಬಂದು, ಎಲ್ಲಿಗೆ ಹೊರಟಿದ್ದೀರಿ ಎಂದು ಪ್ರಶ್ನಿಸಿ, ಬಸ್‌ಸ್ಟಾಂಡ್‌ಗೆ ಬಿಡುತ್ತೇನೆಂದು ನಂಬಿಸಿದ್ದಾನೆ. ಬೇರೆ ಯಾರಾದರೂ ನೋಡಿದರೆ ನಿಮ್ಮ ಚಿನ್ನ ಹಾಗೂ ಹಣ ತೆಗೆದುಕೊಳ್ಳುತ್ತಾರೆ. ಅದನ್ನು ಜಾಗ್ರತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ಬುದ್ದಿಮಾತು ಹೇಳಿದ್ದಾನೆ. ನಶೆ ಇಳಿದಾಗ ಸುಧಾಕರ ಶೆಟ್ಟಿ ಅವರಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಚೈನ್, 2 ಉಂಗುರ, ಕಿಸೆಯಲ್ಲಿದ್ದ 1,500 ರೂ. ಹಾಗೂ ಮೊಬೈಲ್ ಅನ್ನು ಕಳ್ಳ ಎಗರಿಸಿರುವುದು ಅರಿವಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.