ಪಡುಬಿದ್ರಿ: ಕಾಪುವಿನಲ್ಲಿ ಜೂನ್ 12ರಂದು ಬೈಕ್‌ನಲ್ಲಿ ಬಂದು ಪಾದಚಾರಿ ಮಹಿಳೆಯ ಕತ್ತಿನಿಂದ ಸರ ಅಪಹರಿಸಿದ ಪ್ರಕರಣದ ಆರೋಪಿಗಳಾದ ಬಂಟ್ವಾಳ ಗೂಡಿನಬಳಿಯ ಮಹಮ್ಮದ್ ರಫೀಕ್(33) ಮತ್ತು ಕೃಷ್ಣಾಪುರ ಚೊಕ್ಕಬೆಟ್ಟಿನ ತೌಸಿಫ್ ಸಾದಿಕ್(31) ಎಂಬುವರನ್ನು ಪೊಲೀಸರು ಪಡುಬಿದ್ರಿಯಲ್ಲಿ ಸೋಮವಾರ ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಬೈಕ್, 3 ಮೊಬೈಲ್ ಫೋನ್, 2,500 ರೂ., ಎರಡು ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ಕಾಪುವಿನಲ್ಲಿ ಅಪಹರಿಸಿದ 64 ಗ್ರಾಂ ತೂಕದ ಎರಡು ಚಿನ್ನದ ಸರ, ಬ್ರಹ್ಮಾವರದಲ್ಲಿ ಕಳವುಗೈದ 32 ಗ್ರಾಂ ತೂಕದ ಚಿನ್ನದ ಸರ, ಮೇ 7ರಂದು ಬೆಂಗಳೂರು ಮಹಾಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದ 40 ಗ್ರಾಂ ತೂಕದ ಚಿನ್ನದ ಸರ, ಮೇ 27ರಂದು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದ 75 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರು ಕಾಪು ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಹಿರಿಯಡಕ ಎಸ್‌ಐ ಮಂಜುನಾಥ ಮರಬಂದ, ಕಾಪು ಎಸ್‌ಐ ಶ್ರೀಶೈಲ ಮುರಗೋಡ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಂಧಿತ ಮಹಮ್ಮದ್ ರಫೀಕ್ ವಿರುದ್ಧ ಬೆಂಗಳೂರು, ಮಂಗಳೂರು ಕಮಿಷನರೇಟ್ ವ್ಯಾಪ್ತಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ 32 ಪೊಲೀಸ್ ಠಾಣೆಗಳಲ್ಲಿ ಹಾಗೂ ತೌಸಿಫ್ ಸಾಧಿಕ್ ವಿರುದ್ಧ ಬೆಂಗಳೂರು ನಗರದ ಮಲ್ಲೇಶ್ವರಂ ಪೊಲೀಸ್ ಠಾಣೆ, ಮಂಗಳೂರಿನ ಪಾಂಡೇಶ್ವರ, ಬರ್ಕೆ, ಮೂಲ್ಕಿ ಠಾಣೆಗಳಲ್ಲಿ 4 ಸರಗಳ್ಳತನ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಿಗೆ ನಗದು ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್‌ಪಿ ಅಕ್ಷಯ್ ಎಂ.ಹಾಕೆ ತಿಳಿಸಿದರು.