ಜಿಲ್ಲೆ

ಟೈಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ

ಸೌಮ್ಯ ಆರ್

ಬಂಟ್ವಾಳ: ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ಮೈಸೂರು ವಿಭಾಗಮಟ್ಟದ ಟೈಕ್ವಾಂಡೋ ಚಾಂಪಿಯನ್‌ಷಿಪ್-2025ರಲ್ಲಿ ದ.ಕ. ಜಿಲ್ಲೆಯ ಟೈಕ್ವಾಂಡೋ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು 1ಚಿನ್ನ ಹಾಗೂ 1 ಬೆಳ್ಳಿ ಸಹಿತ ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೊಹಮ್ಮದ್ ನಿಹಾಲ್ ನಝೀರ್ 69 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಮೊಹಮ್ಮದ್ ಅಯಾನ್ 82 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಪದಕ ಸಾಧನೆಯೊಂದಿಗೆ ಈ ಇಬ್ಬರು ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟ-2025ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಚಿನ್ನದ ಪದಕ ಗೆದ್ದ ಮೊಹಮ್ಮದ್ ನಿಹಾಲ್ ನಝೀರ್ ಅವರು ಮಂಗಳೂರಿನ ಯೇನಪೋಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪಿಸಿಎಂಸಿ ವಿಭಾಗದ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ದಿ.ಅಬ್ದುಲ್ ನಝೀರ್ ಮೊಹಮ್ಮದ್ ಹಾಗೂ ಸುಮಯ್ಯ ದಂಪತಿ ಪುತ್ರ. ಬೆಳ್ಳಿ ಪದಕ ಗೆದ್ದ ಮೊಹಮ್ಮದ್ ಅಯಾನ್ ಅವರು ತುಂಬೆ ಬಿಎ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಜಿ.ಕೆ.ಮುಹಮ್ಮದ್ ಆರಿಫ್- ನಸೀಮಾ ದಂಪತಿ ಪುತ್ರ.

ದ.ಕ. ಜಿಲ್ಲಾ ಟ್ವೆಕಾಂಡೋ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹ ತರಬೇತುದಾರ ಮೆಹೂಲ್ ಬಂಗೇರ ತರಬೇತಿ ನೀಡಿದ್ದಾರೆ.