ಬೆಂಗಳೂರು: ಚಿನ್ನದ ಬಿಸ್ಕತ್ಗಳನ್ನು ಮಾಡಿ ಕಳ್ಳಸಾಗಣೆ ಮಾಡುತ್ತಿರುವವರು ಈಗ ಚಿನ್ನದ ಪೇಸ್ಟ್ನ ಮೊರೆ ಹೋಗುತ್ತಿದ್ದಾರೆ. ಹೀಗೆ ಚಿನ್ನದ ಪೇಸ್ಟ್ ರೂಪದಲ್ಲಿ ಕಳ್ಳಸಾಗಣೆ ಆಗುತ್ತಿದ್ದ 86 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಕೆಐಎ) ಅಕ್ರಮವಾಗಿ ಸಾಗಿಸುತ್ತಿದ್ದ 86,76,026 ರೂ. ಮೌಲ್ಯದ ಚಿನ್ನದ ಪೇಸ್ಟ್‌ನ್ನು ಕೆಐಎ ಕಸ್ಟಮ್ಸ್ ಅಧಿಕಾರಿಗಳು ಜಪ್ತಿಮಾಡಿದ್ದಾರೆ. ಕಳ್ಳ ಸಾಗಣೆದಾರರು ಹೊಸ ತಂತ್ರಜ್ಞಾನ ಬಳಸಿ ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಅದನ್ನು ಸಾಗಿಸುತ್ತಿರುವ ಕುರಿತು ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಈ ಚಿನ್ನದ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.
ನ. 27ರಂದು ಈ ಕಾರ್ಯಾಚರಣೆ ನಡೆದಿದ್ದು, ಚಿನ್ನ ಪೇಸ್ಟ್ ರೂಪದಲ್ಲಿದ್ದ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರ ದೇಶಗಳಿಂದ ಚಿನ್ನ ಮಾತ್ರವಲ್ಲದೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರು ಮತ್ತು ಕೊರಿಯರ್ ವಿಭಾಗದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಆದರೂ, ಕಳ್ಳ ಸಾಗಾಣೆಕೆ ಸಂಪೂರ್ಣವಾಗಿ ನಿಂತಿಲ್ಲ.