ಚಿಂತಾಮಣಿ: ಅದೃಷ್ಟ ಖುಲಾಯಿಸಿ ಚಿನ್ನದ ಸಿಕ್ತು ಎಂದು ಖುಷಿಯಲ್ಲಿದ್ದ ಏರ್ಪೋರ್ಟ್ನ ಸ್ವಚ್ಛತಾ ಕಾರ್ಮಿಕ. ಅಪರಿಚಿತರು ನೀಡಿದ್ದ ಗೋಲ್ಡ್ ಬಿಸ್ಕೆಟ್ಗಳೇ ದುರಾದೃಷ್ಟವಾಗಿ ಚಿಂತಾಮಣಿಯ ಯುವಕನನ್ನು ಕಾಡಿದ ಘಟನೆ ಇದು!
ನಡೆದುದು ಇಷ್ಟು- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚತಾ ಕಾರ್ಮಿಕನಾಗಿ ಆ ಯುವಕ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಹೆದರಿದ ಅಪರಿಚಿತರು ಈತನಿಗೆ ಚಿನ್ನದ ಬಿಸ್ಕೆಟ್ ಗಳನ್ನ ನೀಡಿ ಹೊರಗೆ ತಂದುಕೊಡುವಂತೆ ಹೇಳಿದ್ದರು. ಅದರಂತೆ ಯುವಕ ಆ ಚಿನ್ನದ ಬಿಸ್ಕೆಟ್ಗಳನ್ನು ಹಿಡಿದು ಹೊರಗೆ ಬಂದಿದ್ದಾನೆ. ಆದರೆ, ಬಿಸ್ಕೆಟ್ ನೀಡಿದವರು ಹೊರಗೆ ಕಾಣಲಿಲ್ಲ. ತನ್ನ ಅದೃಷ್ಟ ಖುಲಾಯಿಸಿತು ಎಂದುಕೊಂಡು ಚಿನ್ನದ ಬಿಸ್ಕೆಟ್ಗಳನ್ನು ಹಿಡಿದು ಮನೆಗೆ ತಂದಿದ್ದಾನೆ. ಆ ಬಿಸ್ಕೆಟ್ಗಳ ಪೈಕಿ ಎರಡನ್ನು ಚಿಂತಾಮಣಿ ನಗರದ ಬಾಲಾಜಿ ಜ್ಯುವೆಲ್ಲರ್ಸ್ ನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾನೆ.
ಬಾಲಾಜಿ ಜ್ಯುವೆಲರ್ಸ್ ಮಾಲೀಕರಿಗೆ ಈತನ ನಡೆ ನುಡಿ ಸಂದೇಹ ತರಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ವಶಪಡೆದರು. ಆತ ಮಾರಾಟ ಮಾಡಲು ತಂದಿದ್ದ ಎರಡು ಚಿನ್ನದ ಬಿಸ್ಕೆಟ್ ಕೂಡ ಮುಟ್ಟುಗೋಲು ಹಾಕಿಕೊಂಡರು. ಆ ಬಿಸ್ಕೆಟ್ಗಳು ತಲಾ 116 ಗ್ರಾಂ ತೂಕ ಹೊಂದಿದ್ದು, 9.66 ಲಕ್ಷ ರೂಪಾಯಿ ಮೌಲ್ಯದವಾಗಿದ್ದವು. ನಂತರ ವಿಚಾರಣೆ ನಡೆಸಿದ ವೇಳೆ ಇನ್ನೂ ನಾಲ್ಕು ಬಿಸ್ಕೆಟ್ ಇರುವುದು ದೃಢಪಟ್ಟಿದೆ. ಆ ಯುವಕನ ಮನೆಯಿಂದ ಅವುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿನ ಯುವಕನನ್ನು ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಅಂಜಪ್ಪ ಎಂದು ಗುರುತಿಸಲಾಗಿದೆ.