ಜಿಲ್ಲೆ

ಗೊಳಸಂಗಿಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ

ಗೊಳಸಂಗಿ: ಗ್ರಾಮದಲ್ಲಿ ನಡೆದ ವಾರದ ಸಂತೆ ಮುಗಿಸಿ ಸ್ವಗ್ರಾಮಕ್ಕೆ ಹೊರಟಿದ್ದ ಬೈಕ್ ಸವಾರನೊಬ್ಬನಿಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ-50ರ ಮಾದರಿ ಬಡಾವಣೆ ಬಳಿ ಗುರುವಾರ ಸಂಜೆ ನಡೆದಿದೆ.
ಘಟನೆಯಿಂದ ಗೊಳಸಂಗಿ ಸಮೀಪದ ಬೀರಲದಿನ್ನಿ ಗ್ರಾಮದ ಬೈಕ್ ಸವಾರ ಕರೆಪ್ಪ ಹನುಮಂತ ಬಳಬಟ್ಟಿ(69) ಇವರ ತಲೆ, ಕಿವಿ ಮತ್ತಿತರ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಘಟನಾ ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕೂಡಲೇ ಸಮೀಪದ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯ ಪಿಎಸ್‌ಐ ರೇಣುಕಾ ಜಕನೂರ, ಎಎಸ್‌ಐ ಎಲ್.ಡಿ. ರೂಡಗಿ ಮತ್ತು ಹೈವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಪಘಾತಕ್ಕೆ ಕಾರಣ ಎನ್ನಲಾದ ನಾಗಾಲ್ಯಾಂಡ್ ಮೂಲದ ಲಾರಿಯನ್ನು ಕೂಡಗಿ ಎನ್‌ಟಿಪಿಸಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಅಪಘಾತಕ್ಕೆ ಆಗದ ಅಂಬುಲೆನ್ಸ್
ಗೊಳಸಂಗಿ ಗ್ರಾಮದ 108 ತುರ್ತು ಸೇವಾ ವಾಹನ ಕಳೆದ 6 ತಿಂಗಳಿನಿಂದ ದುರಸ್ತಿಗೊಳಪಟ್ಟಿದ್ದರಿಂದಾ ಬಂದ್ ಆಗಿ ನಿಂತಿದೆ. ಚತುಷ್ಪಥ ಹೆದ್ದಾರಿ ಹೊಂದಿದ ಗೊಳಸಂಗಿಯಲ್ಲಿ ಆಗಾಗ ರಸ್ತೆ ಅಪಘಾತಗಳಿಗೆ ಬರವಿಲ್ಲ. ಗುರುವಾರ ನಡೆದ ಅಪಘಾತ ಸ್ಥಳಕ್ಕೆ 26 ಕಿಮೀ ದೂರದ ಹೂವಿನ ಹಿಪ್ಪರಗಿಯಿಂದ 108 ವಾಹನ ಬರುತ್ತಿದೆ ಎನ್ನಲಾಗುತ್ತಿತ್ತು. ಅಪಘಾತ ನಡೆದು ಅರ್ಧ ಗಂಟೆ ಕಳೆದರೂ ತುರ್ತು ವಾಹನ ಬಾರದಾದಾಗ ಖಾಸಗಿ ವಾಹನದಲ್ಲಿ ಗಾಯಾಳುವನ್ನು ಸಾಗಿಸಲಾಯಿತು.