ಗೊಳಸಂಗಿ: ಅಂಧ-ಅನಾಥ ಮತ್ತು ನಿರ್ಗತಿಕರ ಪಾಲಿನ ಬದುಕಿಗೆ ಭರವಸೆ ಬೆಳಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ಬಸವನ ಬಾಗೇವಾಡಿ ತಾಲೂಕು ಯೋಜನಾಧಿಕಾರಿ ಸುಧಾ ಪಿ.ಜಿ. ಹೇಳಿದರು.
ಸಮೀಪದ ಮುತ್ತಗಿ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಅನಾಥ ಮತ್ತು ನಿರ್ಗತಿಕರಿಗೆ ಬಟ್ಟೆ, ಚಾಪೆ, ತಲೆದಿಂಬು, ಪಾತ್ರೆಯನ್ನೊಳಗೊಂಡ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಶುಚಿತ್ವ ಧಾರ್ಮಿಕ ಕೇಂದ್ರ ಯೋಜನೆಯಡಿ ತಾಲೂಕಿನ 95 ದೇವಾಲಯ, 9 ಮಠ, 8 ದರ್ಗಾಗಳನ್ನು ಸ್ವಚ್ಛಗೊಳಿಸುವ ಜತೆಗೆ ಕಸದ ತೊಟ್ಟಿಗಳನ್ನು ನೀಡಲಾಗಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ 43 ಅನಾಥ ಮತ್ತು ನಿರ್ಗತಿಕರನ್ನು ಗುರುತಿಸಿ 750 ರಿಂದ 1000 ರೂ. ಮಾಸಾಶನ ನೀಡುತ್ತಿದ್ದೇವೆ.ಅಂತಹ ಇನ್ನೂ ಹಲವು ಅರ್ಹ ವ್ಯಕ್ತಿಗಳು ಈ ಭಾಗದಲ್ಲಿ ಇದ್ದರೆ ಅವರಿಗೂ ನಮ್ಮ ಧರ್ಮಸ್ಥಳ ಯೋಜನೆಯಡಿ ಸೂಕ್ತ ಸಹಕಾರ ನೀಡಲಾಗುವುದೆಂದು ತಿಳಿಸಿದರು.
ಗೊಳಸಂಗಿ ವಲಯದ ಮೇಲ್ವಿಚಾರಕ ರಾಜಾರಾಮ್ ಬಿ., ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಹವುಜಿ, ಸೇವಾ ಪ್ರತಿನಿಧಿ ಯಶೋಧಾ ಸಿನ್ನೂರ ಮತ್ತಿತರರಿದ್ದರು.