ಜಿಲ್ಲೆ

ಜ.12ಕ್ಕೆ ಗೊಳಸಂಗಿ, ಮುತ್ತಗಿ, ಮಸೂತಿ, ತೆಲಗಿ ಪಿಕೆಪಿಎಸ್ ಚುನಾವಣೆ

ಗೊಳಸಂಗಿ: ಗೊಳಸಂಗಿ ಸೇರಿ ಸಮೀಪದ ಮುತ್ತಗಿ, ಮಸೂತಿ, ತೆಲಗಿ ಗ್ರಾಮಗಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ 5 ವರ್ಷದ ಆಡಳಿತ ಮಂಡಳಿಯ ಚುನಾವಣೆ ಮುಂಬರುವ ಜ.12 ರಂದು ನಿಗದಿಯಾಗಿದೆ.

ಆದರೆ, ಮೊದಲ ದಿನ ಶನಿವಾರ ಈ ನಾಲ್ಕೂ ಗ್ರಾಮಗಳ ಪೈಕಿ ಯಾವ ಊರಿನಲ್ಲಿಯೂ ನಾಮಪತ್ರ ಸಲ್ಲಿಕೆಯಾಗಿಲ್ಲ. ಗೊಳಸಂಗಿಯಲ್ಲಿ ಬಿ.ಐ.ಚಲ್ಮಿ, ಮುತ್ತಗಿಯಲ್ಲಿ ಆರ್.ಬಿ.ಬ್ಯಾಕೋಡ, ಮಸೂತಿಯಲ್ಲಿ ಎ.ಟಿ.ಹೆರಕಲ್ ಮತ್ತು ತೆಲಗಿಯಲ್ಲಿ ಎಸ್.ಎಂ.ಹಂಗರಗಿ ಚುನಾವಣೆಯ ರಿಟರ್ನಿಂಗ್ ಆಫೀಸರ್‌ಗಳಾಗಿ ನೇಮಕಗೊಂಡಿದ್ದಾರೆ.

ನಾಲ್ಕೂ ಗ್ರಾಮಗಳ ಸಂಘಗಳಲ್ಲಿ ತಲಾ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ 5, ಮಹಿಳಾ ಮೀಸಲು ಕ್ಷೇತ್ರದಿಂದ 2, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ ‘ಅ’, ಹಿಂದುಳಿದ ಪ್ರವರ್ಗ ’ಬ’, ಸಾಲಗಾರರಲ್ಲದ ಕ್ಷೇತ್ರದಿಂದ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ತೆರೆಮರೆಯ ಲೆಕ್ಕಾಚಾರ ಶುರು: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯ ಕಾವು ಗೊಳಸಂಗಿ, ಮುತ್ತಗಿ, ಮಸೂತಿ ಹಾಗೂ ತೆಲಗಿ ಗ್ರಾಮಗಳಲ್ಲೆಲ್ಲ ರಂಗೇರಿದ್ದು ತೆರೆಮರೆಯ ಲೆಕ್ಕಾಚಾರಗಳು ಶುರುವಾಗಿವೆ. ಕೆಲವರು ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ಕಾಗದಪತ್ರಗಳ ಸಂಗ್ರಹಣೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇನ್ನೂ ಹಲವೆಡೆ ಅವಿರೋಧ ಆಯ್ಕೆಯ ಮರು ಕನಸು ಕಾಣುತ್ತಿದ್ದಾರೆ. ಡಿ.28 ರಂದು ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆ ಜ.4 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಯಾ ಸಂಘಗಳ ಕಚೇರಿಯಲ್ಲಿ ನಡೆಯಲಿದೆ.