ಜಿಲ್ಲೆ

ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆ ಘೊಷಣೆ

ಗೋಕರ್ಣ: ದೇಶ ಸೇರಿ ನಮ್ಮ ಭಾಗದ ಕೃಷಿ ಕ್ಷೇತ್ರಕ್ಕೆ ವಿಶೇಷ ಆರ್ಥಿಕ ಬೆಂಬಲದ ಅಗತ್ಯವಿರುವ ಹಿನ್ನೆಲೆಯಲ್ಲಿ ಗೋಕರ್ಣದ ವ್ಯವಸಾಯ ಸೇವಾ ಸಹಕಾರಿ ಸಂಘ ಕೃಷಿಕರಿಗಾಗಿ ಹೆಚ್ಚಿನ ಅನುಕೂಲತೆಗಳುಳ್ಳ ವಿವಿಧ ಸಾಲ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪೂರ್ಣ ಲಾಭವನ್ನು ನಮ್ಮ ಸಂಘದ ರೈತರು ಗರಿಷ್ಠ ಪ್ರಮಾಣದಲ್ಲಿ ಪಡೆಯಬೇಕು ಎಂದು ಸಂಘದ ಅಧ್ಯಕ್ಷ ರಾಜಗೋಪಾಲ ಅಡಿ ಹೇಳಿದರು.

ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರನ್ನು ಸದಸ್ಯರಾಗಿ ನೋಂದಾಯಿಸಿದೆ. ಸಂಘ ನಡೆಸುತ್ತಿರುವ ಬ್ಯಾಂಕಿಂಗ್ ಮತ್ತು ಪಡಿತರ ವ್ಯವಹಾರದಿಂದ ವರ್ಷದಿಂದ ವರ್ಷಕ್ಕೆ ತನ್ನ ಲಾಭಾಂಶ ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಇದು ಸಂಘದ ಆರ್ಥಿಕ ದೃಢತೆಗೆ ಸಾಕ್ಷಿಯಾಗಿದೆ. ಪ್ರಸಕ್ತ ವರ್ಷದಲ್ಲಿ ಸಂಘ 28.4 ಲಕ್ಷ ರೂ. ಲಾಭಾಂಶ ದಾಖಲಿಸಿದೆ. 9.24 ಕೋಟಿ ರೂ ಠೇವಿನೊಂದಿಗೆ ಸಂಘ 5.17 ಕೋಟಿ ರೂ. ವಿವಿಧ ಸಾಲವನ್ನು ಸದಸ್ಯರಿಗೆ ವಿತರಿಸಿದೆ. 13 ಕೋಟಿ ರೂ.ಗೂ ಅಧಿಕ ದುಡಿಯುವ ಬಂಡವಾಳವಿರುವ ಸಂಘದ ವತಿಯಿಂದ ವರದಿಯ ವರ್ಷದಲ್ಲಿ ಸದಸ್ಯರಿಗೆ ಶೇ. 10ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಇದೇ ವೇಳೆ ರೈತಪರ ಯೋಜನೆಗಳನ್ನು ವಿವರಿಸಿದ ಅವರು, ರೈತರಿಗಾಗಿರುವ ಸಹಕಾರ ವಿಶೇಷ ಮಾಧ್ಯಮ ಸಾಲ ಯೋಜನೆಯಡಿ ಶೇ. 3ರ ಬಡ್ಡಿ ದರದಲ್ಲಿ 10 ಲಕ್ಷ ರೂ. ವರೆಗೆ ಮತ್ತು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಬೆಳೆಸಾಲ ಒದಗಿಸಲಾಗುತ್ತಿದೆ. ಜತೆಗೆ ರೈತರಿಗೆ ವಿವಿಧ ಸಾಲ ಯೋಜನೆಗಳಿವೆ ಎಮದು ವಿವರಿಸಿದರು.

ನಿರಂತರವಾಗಿ ಸಂಘವು ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತ ಆರ್ಥಿಕವಾಗಿ ಉತ್ತಮ ಪ್ರಗತಿಯತ್ತ ಸಾಗಲು ಸಹಾಯ, ಸಹಕಾರ ಮತ್ತು ನೆರವು ನೀಡುತ್ತಿರುವ ಸದಸ್ಯರು, ಗ್ರಾಹಕರು, ನಿರ್ದೇಶಕರು ಮತ್ತು ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ತೇಜಸ್ವಿ ನಾಯ್ಕ, ನಿರ್ದೇಶಕ ಗಣಪಯ್ಯ ಉಪಾಧ್ಯ, ಪ್ರಸನ್ನ ಜೋಗಭಟ್ಟ, ನಾಗರಾಜ ಗೌಡ, ಮಂಗಲ ಮುಕ್ರಿ, ರಮಾ ಆಚಾರಿ, ಸುಬ್ಬಿ ಗೌಡ ಇದ್ದರು. ಸಂಘದ ವ್ಯವಸ್ಥಾಪಕ ಪ್ರದೀಪ ಆಚಾರ್ಯ ಸ್ವಾಗತಿಸಿದರು. ಭಾರ್ಗವಿ ಹೆಗಡೆ, ಗಿರೀಶ ಕಿಣಿ, ವಿವೇಕ ಬೋಮ್ಕರ, ಪರಮೇಶ್ವರ ಗೌಡ ನಿರ್ವಹಿಸಿದರು.