ಗೋಕರ್ಣ: ಬುಧವಾರ ಬೆಳಗಿನ ಜಾವದ ಐದು ಗಂಟೆಯಿಂದ ಮೂರು ತಾಸಿಗೂ ಹೆಚ್ಚು ಕಾಲ ಅವಿರತವಾಗಿ ಸುರಿದ ಭಾರಿ ಮಳೆಗೆ ಇಲ್ಲಿನ ಹಲವು ರಸ್ತೆಗಳ ಮೇಲೆ ಗಂಟೆಗಟ್ಟಲೇ ನೀರು ನಿಂತು ಆತಂಕಕ್ಕೆ ಕಾರಣವಾಯಿತು. ಇದರಿಂದ ರಥಬೀದಿಯಲ್ಲಿ ತಗ್ಗಿನಲ್ಲಿ ರುವ ಕೆಲವು ಮನೆಗಳ ಒಳಗೆ ಕೂಡ ನೀರು ನುಗ್ಗುವಂತಾಯಿತು. ಭಾರಿ ಮಳೆಯ ದಿನಗಳಲ್ಲಿ ರಥಬೀದಿಯಲ್ಲಿ ಪ್ರತಿ ವರ್ಷ ಈ ಅವಾಂತರ ಉಂಟಾ ಗುತ್ತಿದ್ದು, ಇಲ್ಲಿನ ನಿವಾಸಿಗಳು ರಥಬೀದಿಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ನಡುವೆ ಕಾಂಕ್ರೀಟ್ ರಸ್ತೆ ವಿವಾದ ನ್ಯಾಯಾಲಯದ ಮುಂದಿದೆ. ಇಲ್ಲಿನ ಮೀನು ಪೇಟೆ ಪ್ರದೇಶ ಮತ್ತು ತಾರಮಕ್ಕಿಯ ಮುಖ್ಯ ರಸ್ತೆ ಕೂಡ ಜಲಾವೃತವಾಯಿತು. ಪಂಚಾಯತಿ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿದರು. ಗದ್ದೆಗಳಲ್ಲಿ ಉಪ್ಪುನೀರು:ಇಲ್ಲಿನ ರುದ್ರಪಾದದಲ್ಲಿ ತೀವ್ರ ಮಳೆಗೆ ಸಮುದ್ರ ಮುಂದೆ ಬಂದು ನೂರಾರು ಎಕರೆ ಗದ್ದೆಯಲ್ಲಿ ಉಪ್ಪು ನೀರು ತುಂಬಿ ಕೃಷಿ ಕೆಲಸಕ್ಕೆ ಹಿನ್ನೆಡೆ ಉಂಟಾಗಿದೆ. ಪ್ರತಿ ವರ್ಷ ಈ ಅವಘಡ ನಡೆದು ರೈತರು ತೊಂದರೆಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಮುದ್ರ ನೀರು ಒಳಗೆ ಬಾರದಂತೆ ತಡೆಯಲು ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ದುಬ್ಬನಸಶಿಯಿಂದ ರುದ್ರಪಾದದ ವರೆಗೆ ಕೆಲಸ ಪೂರ್ಣಗೊಂಡಿದ್ದು ರುದ್ರಪಾದದಲ್ಲಿ ಮಾತ್ರ ಕಾಮಗಾರಿ ಬಾಕಿ ಉಳಿದಿದೆ.