ಜಿಲ್ಲೆ

ಗೋಕರ್ಣದಲ್ಲಿ ‘ಸತ್ತರೂ ಸುಖವಿಲ್ಲ’ !

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗೋಕರ್ಣ: ಕಷ್ಟದಲ್ಲಿಯೇ ಬದುಕಿದವರು ಸತ್ತರೆ, ಇದ್ದಾಗಂತೂ ಸುಖ ಪಡಲಿಲ್ಲ. ಸತ್ತ ಮೇಲಾದರೂ ಸುಖ ಸಿಗಲಿ ಎಂಬ ವಾಡಿಕೆಯ ಬಹು ಜನಪ್ರಿಯ ಮಾತಿದೆ. ಆದರೆ, ಗೋಕರ್ಣದಲ್ಲಿ ಸಾವಾದರೆ ಅಂತಹವರಿಗೆ ಮತ್ತು ಅವರ ಕುಟುಂಬದವರಿಗೆ ಖಂಡಿತ ನೆಮ್ಮದಿಯಿಲ್ಲ. ಇದಕ್ಕೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಶವ ಪರೀಕ್ಷೆ ನಡೆಸುವ ಶವಾಗಾರದ ದುಸ್ಥಿತಿ ಕಾರಣವಾಗಿದೆ. ಗರಿಷ್ಠ ಸಾವು: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಭೇಟಿ ಕೊಡುವ ತಾಣ ಎಂಬ ಹೆಗ್ಗಳಿಕೆ ಗೋಕರ್ಣಕ್ಕಿದೆ. ಇದಕ್ಕೆ ತಕ್ಕದಾಗಿ ವಾರ್ಷಿಕವಾಗಿ ಅತ್ಯಂತ ಹೆಚ್ಚು ಸಾರ್ವಜನಿಕ ಸಾವು ಸಂಭವಿಸುವ ಕ್ಷೇತ್ರವೂ ಇದೇ ಆಗಿದೆ. ವಿವಿಧ ಕಾರಣಗಳಿಂದ ವರ್ಷವೊಂದಕ್ಕೆ 40ರಷ್ಟು ಜನ (ಅನ್ಯ ಕಡೆಯವರು) ಸಾವಿಗೀಡಾಗುವ ಅಧಿಕೃತ ದಾಖಲೆ ಇಲ್ಲಿನದಾಗಿದೆ. ಈ ಸಾವಿನಲ್ಲಿ ಸಮುದ್ರದಲ್ಲಿ ಮತ್ತು ಇತರೆಡೆಗಳಲ್ಲಿ ನೀರಿನಲ್ಲಿ ಸಂಭವಿಸುವ ಸಾವುಗಳ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗೆ ಪ್ರಾಣ ನೀಗಿದ ಎಲ್ಲರ ಶವ ಪರೀಕ್ಷೆಗೆ ಇರುವ ಏಕಮೇವ ಸರ್ಕಾರಿ ಆಸ್ಪತ್ರೆ ಇಲ್ಲಿನ ಪಿಎಚ್​ಸಿ ಆಗಿದೆ. ಜಿಲ್ಲೆಯ ತಾಲೂಕು ಸ್ಥಳಗಳಲ್ಲಿನ ಆಸ್ಪತ್ರೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಪಿಎಚ್​ಸಿಗಳಲ್ಲಿ ಸಂಜೆಯ ನಂತರ ಶವ ಪರೀಕ್ಷೆ ನಡೆಸುವ ಪರಿಪಾಠವಿಲ್ಲ. ಸಾವಿಗೀಡಾದ ಕುಟುಂಬಗಳು ಬೆಳಗಿನ ತನಕ ಕಾಯುವುದು ಅನಿವಾರ್ಯ. ಆದರೆ, ಸಾವಿಗೀಡಾದ ಪ್ರವಾಸಿಗರ ಕುಟುಂಬದವರಿಗೆ ತೊಂದರೆ ಉಂಟುಮಾಡಬಾರದು ಎನ್ನುವ ದೃಷ್ಟಿಯಿಂದ ಗೋಕರ್ಣದ ಪ್ರಾ.ಆ.ಕೇಂದ್ರದಲ್ಲಿ ಮಾತ್ರ ದಿನ ಮತ್ತು ರಾತ್ರಿಯ ಎಲ್ಲ ಸಮಯಗಳಲ್ಲಿ ಶವ ಮಹಜರು ಕೈಗೊಳ್ಳುವ ಮಾನವೀಯ ಸ್ಪಂದನೆಯನ್ನು ಇವತ್ತಿಗೂ ಕಾಣಬಹುದಾಗಿದೆ. ದಿನದ 24 ಗಂಟೆ ಶವ ಪರೀಕ್ಷೆಗಾಗಿ ಜಿಲ್ಲಾ ವೈದ್ಯಾಧಿಕಾರಿಗಳು ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಕರ್ತವ್ಯ ನೀಡಿ ವಿಶೇಷವಾಗಿ ನೇಮಿಸಿದ್ದಾರೆ. ಶೂನ್ಯ ವ್ಯವಸ್ಥೆ: ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಇದಕ್ಕೆ ನೇಮಿಸಲಾದ ವೈದ್ಯಾಧಿಕಾರಿಗಳು ತಮ್ಮ ಸೇವೆಯನ್ನು ಸಮರ್ಥವಾಗಿ ನಿಭಾಯಿಸಲು ಅತ್ಯಂತ ಅಗತ್ಯವಿರುವ ಯಾವ ವ್ಯವಸ್ಥೆಯೂ ಈ ಶವಾಗಾರದಲ್ಲಿ ಇಲ್ಲದೇ ಇರುವುದರಿಂದ ಒಮ್ಮೊಮ್ಮೆ ಶವ ಪರೀಕ್ಷೆಗೆ ನಾಲ್ಕಾರು ತಾಸು ಹಿಡಿಯುವ ಸಂಭವವೂ ಇದೆ. ಶವ ಪರೀಕ್ಷೆಗಾಗಿ ಸಿಮೆಂಟ್​ನಿಂದ ನಿರ್ವಿುತ ಕೇವಲ ಎರಡು ಟೇಬಲ್​ಗಳಿವೆ. ಹಿಂದೆ ಇದೂ ಇರದೆ ನೆಲದ ಮೇಲೆ ಶವ ಪರೀಕ್ಷೆ ಮಾಡಬೇಕಾದ ದೌರ್ಭಾಗ್ಯವಿತ್ತು. 2020ರಲ್ಲಿ ಅಂದಿನ ತಾಪಂ ಸದಸ್ಯರಾಗಿದ್ದ ಇಲ್ಲಿನ ಮಹೇಶ ಶೆಟ್ಟಿ ಅವರು ತಮ್ಮ ಒಂದು ಲಕ್ಷ ರೂ.ಅನುದಾನದಲ್ಲಿ ಇವುಗಳನ್ನು ನಿರ್ವಿುಸಿ ಕಿಟಕಿ ಬಾಗಿಲುಗಳನ್ನು ಒದಗಿಸಿಕೊಟ್ಟಿದ್ದರು. ಇವತ್ತಿಗೂ ಇವುಗಳನ್ನು ಬಿಟ್ಟರೆ ಶೂನ್ಯ ವ್ಯವಸ್ಥೆಯೇ ಮುಂದುವರಿದೆ. ಕೆಲವು ಬಾರಿ ಎರಡಕ್ಕಿಂತ ಹೆಚ್ಚಿನ ಶವ ಪರೀಕ್ಷೆ ಮಾಡುವ ಅಗತ್ಯ ಬಂದರೆ ನೆಲವೇ ಟೇಬಲ್ ಆಗುತ್ತದೆ! ಈ ಶವಾಗಾರದಲ್ಲಿ ಬೆಳಕಿಗಾಗಿ ಇರುವುದು ಒಂದೇ ಬಲ್ಬ್. ನೀರಿನ ವ್ಯವಸ್ಥೆ ಇಲ್ಲ. ಗುಡ್ಡದ ಮೇಲಿರುವ ಈ ಶವಾಗಾರದ ಕೆಳಗಿಳಿದು ಬಂದು ನೀರನ್ನು ಹೊತ್ತೊಯ್ಯಬೇಕಾಗಿದೆ. ಇವುಗಳನ್ನು ಹೊರತಾಗಿಸಿ ಫ್ರಿಜ್, ವೈದ್ಯಕೀಯ ಪರಿಕರಗಳನ್ನು ಇಡಲು ಬೇಕಾದ ಏರ್ಪಾಡು ಸೇರಿದಂತೆ ಇನ್ನಾವುದೆ ವ್ಯವಸ್ಥೆ ಇದರಲ್ಲಿಲ್ಲ. ಇಂತಹ ದುರವಸ್ಥೆಯಲ್ಲೂ ಹಗಲು ರಾತ್ರಿ ಏಕಸಮವಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪ್ರವಾಸಿಗರ ಅನುಕೂಲಕ್ಕಾಗಿ ಶ್ರಮಿಸುತ್ತಿರುವುದು ಅಪರೂಪದ ಸರ್ಕಾರಿ ಸೇವಾ ದಕ್ಷತೆಗೆ ಉದಾಹರಣೆ. ಅವಕಾಶ ಕೊಡಿ: ಈ ನಡುವೆ ಗೋಕರ್ಣದ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ 2022ರಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟಿದೆ. ಇದರ ಪ್ರಧಾನ ಕಟ್ಟಡದ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ. ಆದರೆ ಪ್ರತ್ಯೇಕವಾದ ಸುಸಜ್ಜಿತ ಶವಾಗಾರ ಈಗಾಗಲೇ ಸಿದ್ಧವಾಗಿದ್ದು ತ್ವರಿತ ಶವ ಪರೀಕ್ಷೆಗಾಗಿ ಇದನ್ನು ಬಳಸಲು ಅವಕಾಶ ಮಾಡಿಕೊಡಲು ಸಾರ್ವಜನಿಕ ಆಗ್ರಹ ಕೇಳಿಬರುತ್ತಿದೆ.

ಹೊಸದಾಗಿ ನಿರ್ವಿುಸಲಾದ ಶವಾಗಾರವನ್ನು ಆದಷ್ಟು ಬೇಗ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ರ್ಚಚಿಸಿದ್ದೇನೆ. ಹೊಸ ಶವಾಗಾರದಲ್ಲಿ ಕೆಲವು ಕಾಮಗಾರಿಗಳು ಬಾಕಿ ಇದ್ದು ಅವುಗಳನ್ನು ಬೇಗ ಮುಗಿಸುವ ಭರವಸೆಯನ್ನು ಅವರು ನೀಡಿದ್ದಾರೆ. | ಡಾ.ನೀರಜ್ ವಿ. ಜಿಲ್ಲಾ ಆರೋಗ್ಯಾಧಿಕಾರಿ ಕಾರವಾರ ಹಾಲಿ ಬಳಸಲಾಗುತ್ತಿರುವ ಶವಾಗಾರ ಯಾವುದೇ ರೀತಿಯಲ್ಲಿಯೂ ಶವ ಪರೀಕ್ಷೆಗೆ ಅನುಕೂಲಕರವಾದ ಸೌಲಭ್ಯಗಳನ್ನು ಹೊಂದಿಲ್ಲ. ಇದರಿಂದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಶ್ರಮ ಪಡುವ ಅನಿವಾರ್ಯತೆಯಿದೆ. ಜತೆಗೆ ಶವ ಪರೀಕ್ಷೆಗೆ ಹೆಚ್ಚಿನ ಸಮಯ ವ್ಯಯವಾಗುತ್ತಿರುವುದರಿಂದ ಜೀವಹಾನಿಗೀಡಾದವರ ಕುಟುಂಬದವರು ಪರದಾಡಬೇಕಾದ ದಯನೀಯ ಸ್ಥಿತಿ ಎದುರಾಗಿದೆ. | ಮಹೇಶ ಶೆಟ್ಟಿ ತಾಪಂ ಮಾಜಿ ಸದಸ್ಯ ಗೋಕರ್ಣ