ಜಿಲ್ಲೆ

ಬಹುಭಾಷಾ ಪಂಡಿತರ ನೆಲೆವೀಡು ಗೋಕರ್ಣ

ಗೋಕರ್ಣ: ಗೋಕರ್ಣವು ಪುರಾತನ ಯಾತ್ರಾ ಸ್ಥಳದ ಜತೆಗೆ ಪರಂಪರೆಯಿಂದ ಬಹುಭಾಷಾ ಪಂಡಿತರ ನೆಲವೀಡಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಮೂಲತಃ ಇಲ್ಲಿನವರಾದ ಐಎಎಸ್ ಅಧಿಕಾರಿ, ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಗೋಕರ್ಣ ಇಂಗ್ಲಿಷ್‌ನಲ್ಲಿ ರಚಿಸಿರುವ ’ಗೋಕರ್ಣ ಅಕ್ರಾಸ್ ಭಾರತ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೋಕರ್ಣ ಅನೇಕಾನೇಕ ಮೇಧಾವಿಗಳನ್ನು, ವೇದವಿದರನ್ನು ಮತ್ತು ಉನ್ನತ ವ್ಯಾಸಂಗ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದವರನ್ನು ಪಡೆದ ಕ್ಷೇತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಸೇವಾಭಾಗ್ಯ ಪಡೆದಿರುವ ನಿತಿನ್ ಅವರಂತಹವರ ಸಹಾಯ- ಸಹಕಾರ ಮತ್ತು ಮಾರ್ಗದರ್ಶನದ ಅವಕಾಶವನ್ನು ಈ ಕ್ಷೇತ್ರ ಪಡೆಯುವಂತಾಗಲಿ ಎಂದು ಹಾರೈಸಿದರು.

ಕೃತಿಯ ಬಗ್ಗೆ ಮಾತನಾಡಿದ ಲೇಖಕ ನಿತಿನ್ ಗೋಕರ್ಣ, ರಾಮಾಯಣ, ಮಹಾಭಾರತ ಮತ್ತು ಪುರಾಣ ಯುಗದಿಂದ ತನ್ನದೇ ಆದ ಕೀರ್ತಿವಂತ ಸ್ಥಾನ ಪಡೆದ ನನ್ನ ಮೂಲ ಸ್ಥಾನ ಗೋಕರ್ಣದ ಮಹತಿಯೇ ಕೃತಿ ರಚನೆಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದರು.

ಹಿರಿಯ ಕ್ಷೇತ್ರ ಪುರೋಹಿತ ಆಚಾರ್ಯ ನಾರಾಯಣ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಗೋಕರ್ಣದ ಕುರಿತು ಆಗಮ ಪಂಡಿತ ವಿದ್ವಾನ್ ಗಣಪತಿ ಶಾಸ್ತ್ರಿ, ಶಿಕ್ಷಣ ತಜ್ಞ ಪ್ರಕಾಶ ಡಿ. ಕಾಮತ ಮಾತನಾಡಿದರು. ವೇದ ವಿದ್ವಾಂಸ ವೇ. ರಾಮಕೃಷ್ಣ ಶಂಕರಲಿಂಗ ಪಾಲ್ಗೊಂಡಿದ್ದರು. ವಿದ್ವಾನ್ ಉದಯ ಮಯ್ಯರ್ ಮತ್ತು ವೈದಿಕರಿಂದ ವೇದಘೋಷ ನಡೆಯಿತು. ವೇ.ಗಣಪತಿ ಉಪಾಧ್ಯ ಸ್ವಾಗತಿಸಿದರು. ಚಾಮಿ ವಿದ್ಯಾ ವಾಹಿನಿ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್, ವೇ.ಅಮೃತೇಶ ಹಿರೇ, ಗಿರೀಶ ಹೆಬ್ಬಾರ, ರವಿ ಗುನಗ ನಿರ್ವಹಿಸಿದರು. ಅನಿಲ ಶೇಟ್ ವಂದಿಸಿದರು.