ಗೋಕರ್ಣ: ಶ್ರೀರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಕ್ಷೇತ್ರ ಆದಿಮೂಲ ಪುಣ್ಯ ಸ್ಥಳವಾಗಿದೆ. ಇದರ ಜೊತೆಗೆ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಅನೇಕ ಪೂವಾಚಾರ್ಯರ ಪೂರ್ವಾಶ್ರಮದ ತಾಯ್ನೆಲವೂ ಗೋಕರ್ಣ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಶ್ರೀಮಠ ಮತ್ತು ಗೋಕರ್ಣ ಕ್ಷೇತ್ರದ ಸಂಬಂಧ ಅವಿಚ್ಛಿನ್ನವಾದದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕೆಯಲ್ಲಿ 32ನೇ ಸ್ವಭಾಷಾ ಚಾತುರ್ವಸ್ಯದಲ್ಲಿ ಕ್ಷೇತ್ರದ ಉಪಾಧಿವಂತ ಮಂಡಳದ ವತಿಯಿಂದ ನಡೆದ ಭಿಕ್ಷಾಸೇವೆ ನಿಮಿತ್ತ ಆಶೀವರ್ಚನ ನೀಡಿದರು.
ಶ್ರೀಮಠದ ಈವರೆಗಿನ 36 ಪೀಠಾಧಿಪತಿಗಳ ಪೈಕಿ 20ಕ್ಕೆ ಕಡಿಮೆ ಇರದಷ್ಟು ಪೂರ್ವಾಚಾರ್ಯರು ಈ ಪಾವನ ಭುಮಿಯವರಾಗಿದ್ದಾರೆ. ಆದಿಭಗವತ್ಪಾದ ಶ್ರೀಶಂಕರಾಚಾರ್ಯ ಗುರುವರ್ಯರು ಅಶೋಕೆಯಲ್ಲಿ ಮಠ ಸ್ಥಾಪನೆಗೂ ಮುನ್ನವೇ ಅಸ್ತಿತ್ವದಲ್ಲಿದ್ದ ಪ್ರಾಚೀನ ಶ್ರೀ ಮಲ್ಲಿಕಾರ್ಜುನ ಮಂದಿರ ಮತ್ತು ಆ ತರುವಾಯದ ಮೂಲಮಠದ ಅಭ್ಯುದಯದಲ್ಲಿಯೂ ಕ್ಷೇತ್ರದ ಕೀರ್ತಿಶೇಷ ಉಪಾಧಿವಂತರ ಕೊಡುಗೆ ಅಪಾರ ಮತ್ತು ಅಮೂಲ್ಯವಾದುದು. ಇಂತಹ ಗೋಕರ್ಣ ಕ್ಷೇತ್ರ ಅನಾದಿಯಿಂದ ಪರಿಶ್ರಮ ಪೂರ್ವಕವಾಗಿ ಬೆಳೆಸಿ ಉಳಿಸಿಕೊಂಡು ಬಂದಿರುವ ವೇದ, ಸಂಸ್ಕೃತ ಮತ್ತು ಅನುಪಮ ಸಂಸ್ಕೃತಿ ಸಂಸ್ಕಾರಗಳ ಸಂರಕ್ಷಣೆ ಕ್ಷೇತ್ರದ ಸಮಸ್ತ ಉಪಾಧಿವಂತ ವೈದಿಕರಿಂದ ಅನವರತ ಮುಂದುವರಿಯುವಂತಾಗಬೇಕು.
ಶ್ರೀಮಠ ಸದಾಸರ್ವದಾ ಕ್ಷೇತ್ರದ ಉಪಾಧಿವಂತರ ಜೊತೆ ಇರುತ್ತದೆ ಎಂದು ಶ್ರೀಗಳು ಆಶೀರ್ವಾದವನ್ನು ದಯಪಾಲಿಸಿದರು. ಉಪಾಧಿವಂತ ಮಂಡಳದ ವೇ. ಪರಮೇಶ್ವರ ಮಾರ್ಕಾಂಡೆ ದಂಪತಿ ಮತ್ತು ರವೀಂದ್ರ ಕೊಡ್ಲೆಕೆರೆ ದಂಪತಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಮಂಡಳದ ಅಧ್ಯಕ್ಷ ರಮೇಶ ಪ್ರಸಾದ, ಮುಖ್ಯ ಅರ್ಚಕ ವೇ. ಅಮೃತೇಶ ಹಿರೇ, ಬಾಲಕೃಷ್ಣ ಜಂಭೆ, ದತ್ತಾತ್ರೇಯ ಹಿರೇಗಂಗೆ, ಗಣೇಶ ಜಂಭೆ, ಪ್ರಶಾಂತ ಹಿರೇಗಂಗೆ, ಲಕ್ಷ್ಮೀನಾರಾಯಣ ಜಂಭೆ, ಇತರರಿದ್ದರು.