ಜಿಲ್ಲೆ

ದಾನಿಗಳು ನೆಟ್ಟ ಕಲ್ಪವೃಕ್ಷ ಗುರುಕುಲ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗೋಕರ್ಣ: ಶ್ರೀಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲ ಎಂಬುದು ಒಂದು ಪುಟ್ಟ ಸಸಿ. ಸಮರ್ಪಣಾ ಭಾವದ ದಾನಿಗಳಿಂದ ನೆಡಲ್ಪಟ್ಟ ಈ ಸಸಿ ಭವಿಷ್ಯದಲ್ಲಿ ದಿವ್ಯ ಕಲ್ಪವೃಕ್ಷವಾಗಿ ಬೆಳೆದು ದೇಶದ ದೊಡ್ಡತನ ಮೆರೆಸಲಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಂಘಟನಾ ಚಾತುರ್ಮಾಸ್ಯ ನಿಮಿತ್ತ ವಿಶೇಷವಾಗಿ ಆಯೋಜಿಸಿದ್ದ ದಾನ-ಮಾನ ಕಾರ್ಯಕ್ರಮದಲ್ಲಿ ಗುರುಕುಲಕ್ಕೆ ವಿಶೇಷ ಸಮರ್ಪಣೆ ಮಾಡಿದ ದಾನಿಗಳನ್ನು ಮತ್ತು ಶಿಕ್ಷಕ- ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿದರು.
ದಾನ-ಮಾನ ಕಾರ್ಯಕ್ರಮ ಎರಡು ವಿಶೇಷತೆಗಳಿಂದ ಕೂಡಿದೆ. ಒಂದು, ಗುರುಕುಲಕ್ಕೆ ಹೆಚ್ಚಿನ ಸಮರ್ಪಣೆ ಮಾಡಿದ ದಾನಿಗಳನ್ನು ಗುರುತಿಸಿ ಅಭಿನಂದಿಸುವುದು. ಎರಡನೆಯದು ಎರಡ್ಮೂರು ವರ್ಷದಲ್ಲಿ ವಿಶೇಷ ಸಾಧನೆಗೈದು ಗುರುಕುಲದ ಕೀರ್ತಿ ಬೆಳಗಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಆರ್ಯ (ಶಿಕ್ಷಕರು), ಆರ್ಯೆಯರನ್ನು ಸನ್ಮಾನಿಸುವ ಅರ್ಥಪೂರ್ಣ ಸಮಾರಂಭ ಇದಾಗಿದೆ ಎಂದರು.
ಯಾವ ದಾನ ಸತ್ಕಾರ್ಯ ಮತ್ತು ಸತ್ಪಾತ್ರರಿಗೆ ಸಮರ್ಪಿತವಾಗುತ್ತದೆಯೋ ಅದು ಮಾತ್ರ ಪುಣ್ಯಪ್ರದವಾದ ಸತ್ಫಲವನ್ನು ಕೊಡುತ್ತದೆ. ತಮ್ಮ ದಾನದ ಸಾರ್ಥಕತೆಯನ್ನು ದಾನಿಗಳು ಕಣ್ಣಾರೆ ಕಾಣುವಂತೆ ಆಗಬೇಕು. ಇಲ್ಲಿನ ವಿದ್ಯಾರ್ಥಿಗಳು ಹೇಗಿದ್ದಾರೆ, ಗುರುಕುಲ ಏನು ಮಾಡುತ್ತಿದೆ ಎಂದು ದಾನಿಗಳು ತಿಳಿಯಬೇಕು. ಗುರುಕುಲಕ್ಕೆ ದಾನವಿತ್ತ ಎಷ್ಟೋ ದಾನಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಿಲು ಇಚ್ಛಿಸದ, ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸಮರ್ಪಣಾ ಸೇವಕರಿದ್ದಾರೆ. ಅಂಥವರ ತ್ಯಾಗ ನೆನಪಿಸಿಕೊಳ್ಳುವುದು ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಇಂದು ವಿಶ್ವವಿದ್ಯಾಪೀಠ ಮತ್ತು ಗುರುಕುಲ ತನ್ನ ವಾಮನತ್ವದಲ್ಲಿದೆ. ಇದರ ತ್ರಿವಿಕ್ರಮ ರೂಪ ಮುಂದೆ ಬೆಳೆದು ಬೃಹತ್ತಾಗಿ ಗೋಚರಿಸಲಿದೆ. ನಾಲ್ಕು ವರ್ಷಗಳಲ್ಲಿ ಇಲ್ಲಿ ಪವಾಡ ಸದೃಶ ಸಾಧನೆಯಾಗಿದೆ. ಇಂಥ ಮಹತ್ಕಾರ್ಯದ ಶ್ರೇಯಸ್ಸು ಇಲ್ಲಿನ ಆರ್ಯ, ಆರ್ಯೆಯರಿಗೆ ಸಲ್ಲುತ್ತದೆ ಎಂದರು. ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಪುರಾಲೇಖ ವಿಭಾಗದ ವಿಷ್ಣು ಭಟ್ಟ ಪಾದೇಕಲ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಜಿ. ಪ್ರಸನ್ನಕುಮಾರ, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ, ಸುಬ್ರಾಯ ಭಟ್ಟ ಮೂರೂರು ಇತರರಿದ್ದರು.