ಜಿಲ್ಲೆ

ಕುಲ, ಧರ್ಮ, ಜಾತಿಗೆ ಅತೀತವಾದುದು ರಕ್ತ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗೋಕರ್ಣ: ಕುಲ, ಧರ್ಮ, ಜಾತಿ ಮತ್ತು ಶಾಸ್ತ್ರಾದಿ ಸರ್ವ ನಿರ್ಬಂಧಗಳಿಂದ ಅತೀತವಾದ ಪವಿತ್ರ ಪ್ರಧಾನ ಜೀವನಾಂಶ ರಕ್ತ ಮಾತ್ರವಾಗಿದೆ ಎಂದು ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮಾ ಹೇಳಿದರು.

ಇಲ್ಲಿನ ಸಂಸ್ಕೃತ ಮಹಾವಿದ್ಯಾಲಯದ ನೇತೃತ್ವದಲ್ಲಿ ಹುಬ್ಬಳ್ಳಿಯ ಶಾ ಧಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೃಷ್ಟಿಯಲ್ಲಿ ಜೀವದಾನಕ್ಕಿಂತ ಮಹತ್ತಾದ ದಾನ ಇನ್ನೊಂದಿಲ್ಲ. ದಾನ ಕಾರ್ಯದಲ್ಲಿ ರಕ್ತಕ್ಕಿಂತ ಮೌಲಿಕವಾದ ವಸ್ತು ಇನ್ನೊಂದಿಲ್ಲ ಎಂದರು.

ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಶ್ರೀಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ವೇ. ಉದಯ ಮಯ್ಯರ್ ಮಾತನಾಡಿ, ಗೋಕರ್ಣ ಕ್ಷೇತ್ರದ ಹಿರಿಯ ವಿದ್ವಾಂಸರಿಂದ ರೂಪಿತವಾದ ಮಹಾವಿದ್ಯಾಲಯ ಅತ್ಯಂತ ಪುರಾತನವಾದುದಾಗಿದೆ. ಕಾಲೇಜ್​ಗೆ ಅನೇಕ ಅಭಿವೃದ್ಧಿ ಕಾರ್ಯಗಳ ಅಗತ್ಯವಿದ್ದು ಈ ಬಗ್ಗೆ ಸಂಸ್ಕೃತ ವಿವಿ ಮತ್ತು ಸ್ವಯಂ ಕುಲಪತಿಗಳು ಮತ್ತಿತರ ಸಂಬಂಧಿಸಿದ ಪ್ರಮುಖರು ಪ್ರಥಮ ಆದ್ಯತೆಯನ್ನಿತ್ತು ಉಪಕರಿಸುವಂತೆ ಅವರು ವಿನಂತಿಸಿದರು.

ಸಂಸ್ಕೃತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ರಾಮಕೃಷ್ಣ ಭಟ್ಟ ಮತ್ತು ರಕ್ತಕೇಂದ್ರದ ಶ್ರೀಧರ ಹಳಿಯಾಳ ಮಾತನಾಡಿದರು. ಮಹಾವಿದ್ಯಾಲಯದಲ್ಲಿ ಸೇವಾ ನಿವೃತ್ತರಾಗುತ್ತಿರುವ ಮಹಾಬಲೇಶ್ವರ ಗಣಪು ಗೌಡ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ವತಿಯಿಂದ ಕುಲಪತಿ ಡಾ. ಅಹಲ್ಯಾ ಅವರನ್ನು ಮಂಡಳದ ಅಧ್ಯಕ್ಷ ವೇ.ರಾಜಗೋಪಾಲ ಅಡಿ ಮತ್ತು ಸಂಚಾಲಕ ವೇ.ಪ್ರಸನ್ನ ಜೋಗಭಟ್ಟ ಮಹಾಗಣಪತಿಯ ಪ್ರತಿಮೆಯನ್ನಿತ್ತು ಸನ್ಮಾನಿಸಿದರು. ಶಿಬಿರದಲ್ಲಿ 80 ನಾಗರಿಕರು ರಕ್ತದಾನ ಮಾಡಿದರು.

ರಕ್ತಕೇಂದ್ರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿ ಇತರರಿದ್ದರು.ಪ್ರಾಚಾರ್ಯ ಡಾ.ಮಂಜುನಾಥ ಭಟ್ಟ ಸ್ವಾಗತಿಸಿದರು. ಉಪನ್ಯಾಸಕರಾದ ತ್ರಯಂಬಕ ಗುರ್ಲಿಂಗ,ಲಕ್ಷ್ಮೀನಾರಾಯಣ ಭಟ್ಟ ನಿರ್ವಹಿಸಿದರು.