ಬೆಳಗಾವಿ : ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಲ್ಲಿ ನಿಮಗೆಷ್ಟು ಗ್ಯಾರಂಟಿಗಳು ಬರುತ್ತವೆ? ನಮಗೂ ಪ್ರತಿ ತಿಂಗಳು ಎರಡು ಸಾವಿರ ಕೊಡ್ತಾರಾ? ಎಂಬಿತ್ಯಾದಿ ಚರ್ಚೆಗಳು ಎಲ್ಲರೆಲ್ಲೂ ಕೇಳಿಬರುತ್ತಿದ್ದು, ಇಲ್ಲೊಂದು ಕುಟುಂಬಕ್ಕೆ ಬಂಪರ್ ಗ್ಯಾರಂಟಿಗಳನ್ನು ಪಡೆಯುತ್ತಿದ್ದು, ಒಂದೇ ಕುಟುಂಬದ 108 ಸದಸ್ಯರು ಈ ಗ್ಯಾರಂಟಿಗಳ ನೇರ ಫಲಾನುಭವಿಗಳಾಗುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದ ಬೆಳಗಾವಿಯ ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಚೌಕಾಶಿ ಕುಟುಂಬಕ್ಕೆ ಬಂಪರ್ ದೊರೆತಿದೆ. ಈ ಮನೆಯಲ್ಲಿರುವ 108 ಜನರಿಗೂ ಕಾಂಗ್ರೆಸ್‌ನ ಐದೂ ಗ್ಯಾರಂಟಿ ಯೋಜನೆಗಳ ಲಾಭ ಸಿಗಲಿದೆ.
ಅವಿಭಕ್ತ ಕುಟುಂಬ ಆಗಿದ್ದರೂ ವಾಸಿಸಲು ಈ ಕುಟುಂಬ 9 ಮನೆಗಳನ್ನು ಹೊಂದಿದೆ. ಈ ಒಂದು ಕುಟುಂಬಕ್ಕೆಯೇ ಒಟ್ಟು ಪ್ರತಿ ತಿಂಗಳು 1800 ಯೂನಿಟ್ ವಿದ್ಯುತ್ ಸಿಗಲಿದೆ. ವಿದ್ಯಾನಿಧಿ ಯೋಜನೆ, 200 ಯುನಿಟ್ ಉಚಿತ ವಿದ್ಯುತ್, ಇದೇ ಮನೆಯಲ್ಲಿ ಈ ವರ್ಷ ಒಟ್ಟು 6 ಜನರು ಪದವಿ ಮುಗಿಸಿದ್ದು, ಎರಡು ವರ್ಷಗಳ ಅವಧಿಯಲ್ಲಿ ಈ ಕಟುಂಬಕ್ಕೆ 4.30 ಲಕ್ಷ ಹಣ ಸಿಗಲಿದೆ. 60 ಕ್ಕೂ ಅಧಿಕ ಹೆಣ್ಣು ಮಕ್ಕಳು ಈ ಮನೆಯಲ್ಲಿದ್ದು, ಈ ಎಲ್ಲರಿಗೂ ಬಸ್ ಪ್ರಯಾಣ ಉಚಿತವಾಗಿ ಸಿಗಲಿದ್ದು, ಗ್ಯಾರಂಟಿಗಳ ಬಹುಪಾಲು ಲಾಭಾಂಶ ಸಿಗಲಿರುವ ಬಗ್ಗೆ ಕುಟಂಬದ ಸದಸ್ಯರು ಸಂತಸಗೊಂಡಿದ್ದಾರೆ.