ಕುಂದಾಪುರ: ನಿರಂತರ ದೇವರ ಸೇವೆ ಮಾಡುವವರನ್ನು ಭಗವಂತನೂ ಕೈಬಿಡುವುದಿಲ್ಲ. ಹಣವಂತನಿಗಿಂತ ದಾನ ಮಾಡುವ ಗುಣವಂತ ಶ್ರೇಷ್ಠ. ನಾಗರಪಂಚಮಿಯಂದೇ ನಾಗಾನುಗ್ರಹ ಪ್ರಶಸ್ತಿ ಪ್ರದಾನ ದೇವರ ಶ್ರೀರಕ್ಷೆ ಆಗಿದೆ ಎಂದು ಶೃಂಗೇರಿ ಶಾರದಾ ಪೀಠ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಅಭಿಪ್ರಾಯಪಟ್ಟರು.
ಮರವಂತೆಯಲ್ಲಿರುವ ಸುಬ್ರಹ್ಮಣ್ಯ ವಿದ್ಯಾಗಣಪತಿ ನವಗ್ರಹ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನಾಗದೇವರಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ನಡೆದ 10ನೇ ವರ್ಷದ ನಾಗಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ಪವನ್ ಕಿರಣಕೆರೆ ಅಧ್ಯಕ್ಷತೆ ವಹಿಸಿದ್ದರು. ಘಟಪ್ರಭಾ ಜೆಎನ್‌ಎಸ್ ಗ್ರೂಪ್ ಆಫ್ ಕಂಪನಿ ಮಾಲೀಕ ಎಚ್.ಜಯಶೀಲ ಶೆಟ್ಟಿ ಅವರಿಗೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ನಾಗಾನುಗ್ರಹ ಪ್ರಶಸ್ತಿ ಪ್ರದಾನಿಸಿದರು.
ಕೋಟೇಶ್ವರ ವಾಸ್ತು ತಜ್ಞ ಡಾ.ಬಸವರಾಜ್ ಶೆಟ್ಟಿಗಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಳದ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಸಾಮಾಜಿಕ ಕಾರ್ಯಕರ್ತ ಶಂಕರ ಅಂಕದಕಟ್ಟೆ ಉಪಸ್ಥಿತರಿದ್ದರು.
ಸಿ.ಎಸ್.ಖಾರ್ವಿ ಕೊಡೇರಿ ಸ್ವಾಗತಿಸಿದರು. ತಿಮ್ಮ ವಿ. ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ಆಚಾರ್ ಸಾಯೆಬ್ರಕಟ್ಟೆ ವಂದಿಸಿದರು. ಗೋವಿಂದ ಎಂ.ಮಟ್ನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.