ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ದೇವಲ ಮಹರ್ಷಿ ವೃತ್ತದಲ್ಲಿರುವ ದೇವರ ದಾಸಿಮಯ್ಯ ಅವರ ಪುತ್ಥಳಿಯನ್ನು ಜಗದೀಶ್ ಶೆಟ್ಟರ್ ಅನಾವರಣ ಮಾಡಿದರು. ಎನ್.ಮಹೇಶ್, ಬಾಲರಾಜು, ಹರ್ಷವರ್ಧನ್, ಎಂ.ಡಿ .ಲಕ್ಷ್ಮೀ ನಾರಾಯಣ ಸ್ವಾಮಿ, ಎಂ.ವಿ. ರೂಪಾ, ಗಿರೀಶ್ ಬಾಬು ಇದ್ದರು. 
ಜಿಲ್ಲೆ

ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ದೇವರ ದಾಸಿಮಯ್ಯ

ಕೊಳ್ಳೇಗಾಲ : ವಚನ ಸಾಹಿತ್ಯಕ್ಕೆ 11ನೇ ಶತಮಾನದಲ್ಲಿ ಅಡಿಪಾಯ ಹಾಕಿಕೊಟ್ಟವರು ದೇವರ ದಾಸಿಮಯ್ಯ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ದೇವಾಂಗ ಪೇಟೆಯ ದೇವಲ ಮಹರ್ಷಿ ವೃತ್ತದಲ್ಲಿ ನಿರ್ಮಿಸಲಾಗಿರುವ ದೇವಾಂಗ ಕುಲ ಪುರುಷ, ಆದ್ಯ ವಚನಕಾರರ ದೇವರ ದಾಸಿಮಯ್ಯ ಅವರ ಪುತ್ಥಳಿಯನ್ನು ಬುಧವಾರ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣರು ಇನ್ನಿತರ ಶರಣರಿಂದ ವಚನ ಸಾಹಿತ್ಯ ಪರಿಣಾಮಕಾರಿಯಾಗಿ ಹೊರಹೊಮ್ಮಿದ ಮೇಲೆ ವಚನ ಸಾಹಿತ್ಯಕ್ಕೆ ಹೆಚ್ಚು ಮಹತ್ವ ಬಂತು ಎಂದರು. ದೇವರ ದಾಸಿಮಯ್ಯ ಪುಣ್ಯ ಪುರುಷರು, ಆದ್ಯ ವಚನಕಾರರು, ಅವರು ತಪಸ್ವಿ ಪುರುಷರು. ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ಸಂಸ್ಕಾರವಂತ ಜೀವನ ಸಾಗಿಸಿ ಎಂಬ ಸಂದೇಶವನ್ನು ದೇವರ ದಾಸಿಮಯ್ಯ ಸಾರಿದ್ದಾರೆ. ಇಂತಹ ಮಹಾ ಪುರುಷನನ್ನು ಪಡೆದ ದೇವಾಂಗ ಸಮಾಜವೇ ಧನ್ಯ ಎಂದರು.

ಮೌಢ್ಯ ತೊಲಗಿಸಬೇಕು: ಮುಖ್ಯ ಮಂತ್ರಿಯಾದವರು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಡ್ಯವಿತ್ತು. ನಾನು ಸಿಎಂ ಆದ 3 ತಿಂಗಳಿಗೆ ಚಾಮರಾಜನಗರಕ್ಕೆ ಬಂದೆ. ನನ್ನ ಅವಧಿಯಲ್ಲಿಯೇ ಮಲೆ ಮಹದೇಶ್ವರ ಪ್ರಾಧಿಕಾರ ಅನುಷ್ಠಾನವಾಯಿತು. ನಂತರ 3 ಸಲ ಜಿಲ್ಲೆಗೆ ಭೇಟಿ ನೀಡಿದ್ದೇನೆ. ನನ್ನ ಅಧಿಕಾರ ಅವಧಿ 10 ತಿಂಗಳಿದೆ ಎಂಬುದು ಮೊದಲೇ ಗೊತ್ತಿತ್ತು. ಚಾಮರಾಜನಗರಕ್ಕೆ ಬಂದಾಗ, ಆ ಅವಧಿ 1 ದಿನ ಕಡಿಮೆಯೂ ಆಗಲಿಲ್ಲ, ಹೆಚ್ಚು ಆಗಲಿಲ್ಲ. ಈ ಮೌಢ್ಯವನ್ನು ಬಿಡಬೇಕು ಎಂದರು.

ವಿಚಾರವಾದಿ ಜೆ.ಎಚ್. ಪಾಟೀಲ್ ಅವರೇ ಈ ಜಿಲ್ಲೆಯನ್ನು ನೂತನ ಜಿಲ್ಲೆಯೆಂದು ಉದ್ಘಾಟಿಸಿದ್ದು ಮಲೆ ಮಹದೇಶ್ವರ ಬೆಟ್ಟದಲ್ಲಿ, ಜಿಲ್ಲಾ ಕೇಂದ್ರದಲ್ಲಿ ಅಲ್ಲ. ಅವರಿಗ್ಯಾರೋ ಅಧಿಕಾರ ಹೋಗುತ್ತದೆ ಎಂಬುದಾಗಿ ಹೇಳಿಬಿಟ್ಟಿದ್ದರು. ಆದರೆ, ನಾನು ಬಂದ ಹೋದ ಮೇಲೆ ಹಲವು ಜನರು ಬಂದರು ಎಂದು ಜಗದೀಶ ಶೆಟ್ಟರ್ ಹೇಳಿದರು.

ಯಾದಗಿರಿ ಜಿಲ್ಲೆಯ ಮುದ್ದನೂರು ಸಂಸ್ಥಾನ ಮಠದ ಡಾ.ಈಶ್ವರಾನಂದ ಸ್ವಾಮೀಜಿ ಮಾತನಾಡಿ, ದೇವರ ದಾಸಿಮಯ್ಯ ರಚಿಸಿದ 176 ವಚನಗಳಲ್ಲಿ ಸಮಾಜಕ್ಕೆ ಏನು ತಿಳಿಸಬೇಕೆಂಬುದನ್ನು ತಿಳಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ಲಿಂಗ ಸಮಾನತೆ ಪರವಾಗಿ ಕೆಲಸ ಮಾಡಿದ್ದಾರೆ. ಕೆಳಗಿದ್ದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಇಂತಹ ಮಹಾಪುರುಷರ ಪುತ್ಥಳಿಯನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದರು.

ದೇವಾಂಗ ಪೇಟೆಯ ಶ್ರೀಕುಮಾರ ಸ್ವಾಮೀಜಿ, ಶ್ರೀ ಪರಸಂ ಮಹೇಶ್ ಸ್ವಾಮೀಜಿ, ಶ್ರೀ ಮೇಡಂ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಬಿ.ಹರ್ಷವರ್ಧನ್, ಶೇವರ ದಾಸಿಮಯ್ಯ ಪುತ್ಥಳಿ ನಿರ್ಮಾತೃ ಎನ್.ಗಿರೀಶ್ ಬಾಬು, ಅಂಜಲಿ ಗಿರೀಶ್ ಬಾಬು, ಎಂಎಲ್‌ಸಿ ಎಂ.ಡಿ. ಲಕ್ಷ್ಮೀ ನಾರಾಯಣ, ಸಿ.ಎಸ್.ನಿರಂಜನ್ ಕುಮಾರ್, ಆಂಧ್ರ ದೇವಾಂಗ ಸಂಘದ ನಿರ್ದೇಶಕ ಎ.ಎನ್. ನಾಗರಾಜಯ್ಯ (ಅಚ್ಗಾಳ್), ನಗರಸಭೆ ಸದಸ್ಯ ಎ.ಪಿ.ಶಂಕರ್, ಎಸ್.ಆರ್.ಮನೋಹರ್, ಸಿ.ಎಂ ಪರಮೇಶ್ವರ್ (ಚಿಂತು), ಪವಿತ್ರ ರಮೇಶ್, ಪ್ರಕಾಶ್ ಶಂಕನಪುರ, ನಗರಸಭಾ ನಾಮ ನಿದೇರ್ಶಿತ ಮಾಜಿ ಸದಸ್ಯ ಮಧುಚಂದ್ರ, ಆಂಧ್ರ ದೇವಾಂಗ ಮಹಾಸಭಾ ಕುಲದ ಶೆಟ್ಟಿಗರು ಮತ್ತಿತರಿದ್ದರು.