ಜಿಲ್ಲೆ

ದೇವರ ಎತ್ತುಗಳಿಗೆ ಮೇವು ಪೂರೈಕೆ

ಹರ್ಷ ನ.ಪುರೋಹಿತ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕಿನ ದೇವರ ಎತ್ತುಗಳಿಗೆ ಸರ್ಕಾರದಿಂದ ಪೂರೈಕೆಯಾದ 4.3 ಟನ್ ಮೇವು ವಿತರಿಸಲಾಗಿದೆ ಎಂದು ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ರಂಗಪ್ಪ ತಿಳಿಸಿದರು.

ಬಿ.ಜಿ.ಕೆರೆ ಗ್ರಾ.ಪಂ.ವ್ಯಾಪ್ತಿಯ ಮುತ್ತಿಗಾರಹಳ್ಳಿಯಲ್ಲಿ ದೇವರ ಎತ್ತುಗಳಿಗೆ ಶುಕ್ರವಾರ ಮೇವು ವಿತರಿಸಿ ಮಾತನಾಡಿದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಮೇವು ಪೂರೈಕೆ ಕುರಿತು ಅಧಿವೇಶನದಲ್ಲಿ ಗಮನ ಸೆಳೆದ ಹಿನ್ನೆಲೆಯಲ್ಲಿ ಸರ್ಕಾರದಿಂದ ತಾತ್ಕಾಲಿಕವಾಗಿ ಪಶು ಪಾಲನಾ ಇಲಾಖೆ ಮೂಲಕ ಮೇವು ಪೂರೈಸಲು 45,920 ರೂ. ಬಿಡುಗಡೆಗೊಳಿಸಿದೆ ಎಂದರು.

ತಾಲೂಕಿನ ಮುತ್ತಿಗಾರಹಳ್ಳಿ-289 ಸೂರಮ್ಮನಹಳ್ಳಿ-85, ಚಿಕ್ಕುಂತಿ-140, ರಾಯಾಪುರ-60 ಸೇರಿ 574 ದೇವರ ಎತ್ತುಗಳಿವೆ.

ಕೊಳ್ಳೇಗಾಲದಿಂದ ಪೂರೈಕೆಯಾಗಿರುವ ಭತ್ತದ ಮೇವನ್ನು ಎತ್ತುಗಳ ಸಂಖ್ಯೆಗಳಿಗನುಸಾರವಾಗಿ ವಿತರಿಸಲಾಗಿದೆ ಎಂದು ಹೇಳಿದರು.

ಮಳೆ ಕೊರತೆ ಕಾರಣ ಮುಂದಿನ ದಿನಗಳಲ್ಲೂ ಮೇವು ಪೂರೈಕೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗ್ರೇಡ್-2 ತಹಸೀಲ್ದಾರ್ ಮಹಂತೇಶ್, ಗ್ರಾಪಂ ಅಧ್ಯಕ್ಷ ಎಸ್.ಜಯಣ್ಣ, ಪಶುವೈದ್ಯಾಧಿಕಾರಿ ಡಾ.ಗಿರಿರಾಜ್, ಪಿಡಿಒ ಎನ್.ಮಲ್ಲಿಕಾರ್ಜುನ್, ದೇವರ ಎತ್ತುಗಳ ಪೌಳಿ ಅಧ್ಯಕ್ಷ ಮ್ಯಾಸರಹಟ್ಟಿ ಬೋಸಯ್ಯ, ಪಾಲಯ್ಯ, ಗ್ರಾ.ಪಂ. ಸದಸ್ಯ ಓಬಣ್ಣ ಇತರರಿದ್ದರು.