ಜಿಲ್ಲೆ

ಭಕ್ತರಿಗೆ ತೃಪ್ತಿಯಾದರೆ ದೇವರಿಗೆ ಸಂತೃಪ್ತಿ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ದೇವತಾಕಾರ್ಯ, ಉತ್ಸವ, ಅನ್ನದಾಸೋಹದಿಂದ ಭಕ್ತರು ತೃಪ್ತಿಯಾದರೆ ದೇವರೂ ಸಂತೃಪ್ತಿ ಹೊಂದಿದಂತೆ. ಭಕ್ತಿ, ಶ್ರದ್ಧೆ, ಏಕಾಗ್ರತೆ, ನಿಷ್ಠೆ ಮುಖ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ ಬಹ್ಮಕಲಶೋತ್ಸವದ ಮೂರನೇ ದಿನವಾದ ಶುಕ್ರವಾರದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದೋಷಗಳನ್ನು ಪರಿಹರಿಸುವುದಕ್ಕೋಸ್ಕರ ಬ್ರಹ್ಮಕಲಶದಂತಹ ವಿಧಾನಗಳನ್ನು ನಡೆಸಲಾಗುತ್ತದೆ. ಉತ್ತರ ಪ್ರದೇಶದ ಪ್ರಯಾಗದಲ್ಲಿ ಕುಂಭಮೇಳ ಸಂಪನ್ನಗೊಳ್ಳಲಿದೆ. ಅದೇ ರೀತಿ ಅಳದಂಗಡಿಯಲ್ಲಿನ ಶ್ರೀ ಸೋಮನಾಥೇಶ್ವರೀ ದೇವಿಯು ಕುಂಭ ರೂಪದಲ್ಲಿದ್ದಾಳೆ. ಇದೊಂದು ಸುಯೋಗ. ದೇವಾಲಯದೊಳಗಿನ ಹಾಗೂ ನಮ್ಮೊಳಗಿನ ಓಜಸ್ಸು, ತೇಜಸ್ಸು ಪರಿಪಕ್ವವಾಗಲು ವಿಶೇಷ ಪ್ರಯತ್ನ ಇದಾಗಿದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಆನುವಂಶಿಕ ಆಡಳಿತ ಮೊಕ್ತೇಸರ ಮತ್ತು ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರು ನಿತ್ಯ ಶಕ್ತಿಯುತವಾಗಿ ಭಕ್ತರಿಗೆ ಅನುಗ್ರಹಿಸುತ್ತಾನೆ. ಆದರೆ ಸಾನ್ನಿಧ್ಯದಲ್ಲಿ ಇನ್ನಷ್ಟು ಶಕ್ತಿ ತುಂಬಲು ಬ್ರಹ್ಮಕಲಶ ಮಾಡಲಾಗುತ್ತದೆ. ಇಲ್ಲಿನ ಬ್ರಹ್ಮಕಲಶದಲ್ಲಿ ಸ್ವಯಂಸೇವಕರ ಶ್ರಮ, ದಾನಿಗಳ ನೆರವು ಮರೆಯಲು ಸಾಧ್ಯವಿಲ್ಲ. ದೇವಳದ ಅಭಿವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಶಿವಪ್ರಸಾದ್ ಅಜಿಲ,ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಇದ್ದರು. ದಾನಿಗಳಾದ ರಕ್ಷಿತ್ ಶಿವರಾಂ, ಸುಮಂತ ಕುಮಾರ್ ಜೈನ್, ಪ್ರವೀಣ ಕುಮಾರ್ ಇಂದ್ರ, ಡಾ.ಶಶಿಧರ ಡೋಂಗ್ರೆ, ಜಯದೀಪ್ ದೇವಾಡಿಗ, ಪ್ರಶಾಂತ ಪಾರೆಂಕಿ, ಲಿಂಬಯ ದೇವಾಡಿಗ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರನ್ನು ಹಾಗೂ ಅಜಿಲ ನಡಾವಳಿ ಎಂಬ ಪುಸ್ತಕ ಬರೆದ ಮುಂಜುನಾಥ ಭಟ್ ಅಂತರ ಅವರನ್ನು ಸನ್ಮಾನಿಸಲಾಯಿತು. ದೇವಳದ ವತಿಯಿಂದ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಅಳದಂಗಡಿ ವಲಯದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು. ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಶ್ರೀ ಕೃಷ್ಣ ಮೆಲೋಡಿಸ್ ಸವಣಾಲು ಅವರಿಂದ ರಸಮಂಜರಿ ಹಾಗೂ ವೇಣೂರಿನ ಐಸಿರಿ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು. ಶುಕ್ರವಾರ ಬೆಳಗ್ಗೆ ದೇವಳದೊಳಗೆ ಶಾಂತಿ ಹೋಮಗಳು, ಕಲಶಾಭಿಷೇಕ, ಅಷ್ಟಬಂಧ ಪ್ರಕ್ರಿಯೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮಂಟಪ ಸಂಸ್ಕಾರ, ಮಂಡಲ ರಚನೆ, ಬಲಿ ಬಿಂಬಾಧಿವಾಸ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಇಂದು ಬ್ರಹ್ಮಕಲಶ ದೇವಳದೊಳಗೆ ಬೆಳಗ್ಗೆ ಪುಣ್ಯಾಹ, ಗಣಪತಿ ಹೋಮ, ದುರ್ಗಾಹೋಮ, ಪೂರ್ವಾಹ್ನ 9.02ರ ಕುಂಭ ಲಗ್ನ ಸುಮಹೂರ್ತದಲ್ಲಿ ದ್ರವ್ಯಮಿಳಿತ ಬ್ರಹ್ಮಕುಂಭಾಭಿಷೇಕ, ಮಹಾನ್ಯಾಸ, ಪ್ರಸನ್ನ ಪೂಜೆ, ಅವಸ್ರುತ ಬಲಿ. ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಸಂಜೆ ದೇವರ ಉತ್ಸವ ಸಂಪನ್ನಗೊಳ್ಳಲಿದೆ.

ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ ಬದಿಯಲ್ಲೇ ಇದ್ದು ಶಿಥಿಲಾವಸ್ಥೆಯಲ್ಲಿತ್ತು. ನಾನು ಪ್ರತಿಬಾರಿ ಆ ದಾರಿಯಲ್ಲಿ ಹೋಗುವಾಗ ಗಮನಿಸುತ್ತಿದ್ದೆ. ಅದೀಗ ಸಂಪೂರ್ಣ ನವೀಕರಣ ಹೊಂದಿ ಸುಂದರ ದೇವಸ್ಥಾನವಾಗಿ ಶ್ರೀ ಮಹಾಗಣಪತಿಯು ವಿರಾಜಮಾನನಾಗಿರುವುದು ಸಂತಸ ತಂದಿದೆ. ಗಣಪತಿ ಸಂತುಷ್ಟನಾದರೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. - ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಮಿತಿ ಗೌರವಾಧ್ಯಕ್ಷ