ಜಿಲ್ಲೆ

ನಿರ್ಗತಿಕರ ಸೇವೆಯಲ್ಲೇ ದೇವರಿದ್ದಾನೆ

ಹುಬ್ಬಳ್ಳಿ: ಅನಾಥರು, ಅಶಕ್ತರ ಸೇವೆ ಮಾಡುವುದರಲ್ಲೇ ದೇವರು ಅಡಗಿದ್ದಾನೆ. ಅದು ಬಿಟ್ಟು ಗುಡಿ- ಗುಂಡಾರಗಳಲ್ಲಿ ಹುಡುಕಿದರೆ ಸಿಗುವುದಿಲ್ಲ. ಇಂತಹ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸಾಕ್ಷಾತ್ ದೇವರನ್ನು ಕಾಣಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಗಂಗಮ್ಮ ಗಿರಿಯಪ್ಪಗೌಡ ಬಾಳನಗೌಡರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ದುಡ್ಡು, ದೊಡ್ಡ ಮನೆ, ಓಡಾಡಲು ವಾಹನಗಳನ್ನು ಹೊಂದಿದವರು, ದೊಡ್ಡ ಕುರ್ಚಿ ಮೇಲೆ ಕುಳಿತುಕೊಳ್ಳುವವರನ್ನು ದೊಡ್ಡವರು ಎನ್ನಲು ಸಾಧ್ಯವಿಲ್ಲ. ಯಾರಿಗೆ ದೊಡ್ಡ ಮನಸ್ಸು ಇರುತ್ತದೆಯೋ ಅವರನ್ನು ಜನರು ದೊಡ್ಡವ ರೆಂದು ಕರೆಯುತ್ತಾರೆ. ಅವರಿಗೆ ಗೌರವ ಕೊಡುತ್ತಾರೆ ಎಂದು ಹೇಳಿದರು. ಭೂದಾನಿಗಳಾದ ಶಿವಲಿಂಗಮ್ಮ ಶಂಕರಗೌಡ ಬಾಳನಗೌಡರ ಹಾಗೂ ಕಟ್ಟಡಕ್ಕೆ ದೇಣಿಗೆ ನೀಡಿದವರನ್ನು ಸ್ವಾಮೀಜಿಗಳು ಆಶೀರ್ವದಿಸಿದರು.

ಟ್ರಸ್ಟ್ ಕಟ್ಟಡ ಸಮಿತಿ ಅಧ್ಯಕ್ಷ ಚನ್ನು ಹೊಸಮನಿ, ಕಾರ್ಯದರ್ಶಿ ಗಣೇಶ ಕಠಾರೆ, ಕೋಶಾಧ್ಯಕ್ಷ ಅರ್ಜುನ ಅಗ್ರವಾಲ್, ಹರ್ಷವರ್ಧನ ಶೀಲವಂತ, ಪಾಲಿಕೆ ಮಾಜಿ ಸದಸ್ಯರಾದ ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಆಹಾರ ಧಾನ್ಯ ವರ್ತಕರ ಸಂಘದ ಶಿವಾನಂದ ಸಣ್ಣಕ್ಕಿ, ಹಮಾಲಿ ಕಾರ್ವಿುಕರ ಸಂಘದ ದುರಗಪ್ಪ ಚಿಕ್ಕತುಂಬಳ, ಗುರುಸಿದ್ದಪ್ಪ ಅಂಬಿಗೇರ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಸದಸ್ಯರಾದ ಈಶ್ವರ ಕಿತ್ತೂರ, ಸುರೇಶ ಕಿರೇಸೂರ, ಜೈಂಟ್ಸ್ ವೆಲ್​ಫೇರ್ ಫೌಂಡೇಷನ್ ಉಪಾಧ್ಯಕ್ಷ ವಿ.ಜಿ. ಪಾಟೀಲ, ಸಿದ್ದು ಮಮದಾಪುರ, ಬಾಳನಗೌಡರ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ, ವರ್ತಕರು ಪಾಲ್ಗೊಂಡಿದ್ದರು.

ಸೋಮಶೇಖರ ಸೋಮನಕಟ್ಟಿ ಸ್ವಾಗತಿಸಿದರು. ಡಾ. ರಾಮು ಮೂಲಗಿ, ಬಿ.ಎಸ್. ಮಾಳವಾಡ ಅವರು ಕಾರ್ಯಕ್ರಮ ನಿರ್ವಹಿಸಿದರು.