ಜಿಲ್ಲೆ

ಪರಿಹಾರ ಮೊತ್ತ 20 ಲಕ್ಷ ರೂ.ಗೆ ಹೆಚ್ಚಿಸಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಸಿಡಿಲು ಬಡಿದು ಮೃತಪಟ್ಟವರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ಸರ್ಕಾರ ನೀಡುವ 5 ಲಕ್ಷ ರೂ. ಪರಿಹಾರವನ್ನು 20ಲಕ್ಷ ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ದೇವದುರ್ಗ ನಾಗರಿಕರ ವೇದಿಕೆ ಹಾಗೂ ವಿವಿಧ ರೈತ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಸತ್ಯಮ್ಮಗೆ ಗುರುವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕಿದೆ. ಅಗತ್ಯ ಇರುವ ಕಡೆ ಸಿಡಿಲು ತಡೆ ಉಪಕರಣಗಳನ್ನು ಅಳವಡಿಸಬೇಕು. ಸರ್ಕಾರ ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳದ ಕಾರಣ ಸಿಡಿಲಿಗೆ ರೈತರು, ಕಾರ್ಮಿಕರು, ದನಗಾಹಿ, ಕುರಿಗಾಹಿಗಳು ಬಲಿಯಾಗುತ್ತಿದ್ದಾರೆ. ಆದರೆ, ಸರ್ಕಾರ ನೀಡುವ ಪರಿಹಾರದ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಕೂಡಲೇ ಸರ್ಕಾರ ಮೃತರ ಕುಟುಂಬಕ್ಕೆ 20 ಲಕ್ಷ ರೂ., ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮೃತಪಟ್ಟ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಸಿಡಿಲಿಗೆ ಬಲಿಯಾಗುವ ಜಾನುವಾರು, ಕುರಿಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಸಿಡಿಲಿನ ಕುರಿತು ತಜ್ಞರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಮಲ್ಲಿಕಾರ್ಜುನ ಪಾಟೀಲ್, ಹನುಮಗೌಡ ನಾಯಕ, ರಾಘವೇಂದ್ರ ನಾಯಕ ಅಂಜಳ, ಎಚ್.ಶಿವರಾಜ್, ಕ್ರಾಂತಿಕುಮಾರ್ ರಾಯಚೂರಕರ್ ಇತರರಿದ್ದರು.