ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಮಾತನಾಡಿದರು.  
ಜಿಲ್ಲೆ

ದೇವರು, ಧರ್ಮದಿಂದ ದೇಶ ಉಳಿವು

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ದೇವರು, ದೇಶ ಮತ್ತು ಧರ್ಮ ನೀತಿಗಳ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯಭಾರ ಮಾಡಿದ್ದರು. ದೇವರು ಉಳಿದರೆ ಧರ್ಮ ಉಳಿಯುತ್ತದೆ. ಧರ್ಮ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂಬುದನ್ನು ಮನಗಂಡಿದ್ದ ಅವರು ಗೋ ಬ್ರಾಹ್ಮಣ ಪ್ರತಿಪಾಲಕರಾಗಿದ್ದರು ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಹೇಳಿದರು.

ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗ ಬಸ್ರೂರು ಆಶ್ರಯದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆದ ಬಸ್ರೂರು ಸ್ವಾತಂತ್ರೃ ದಿನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಛತ್ರಪತಿ ಶಿವಾಜಿ ಇತಿಹಾಸ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವುದು ಅಗತ್ಯ. ಬಸ್ರೂರಿನ ಜನರು ಫೆ.13ರಂದು ಸ್ವಾತಂತ್ರೃ ದಿನಾಚರಿಸುವುದು ಸಮಂಜಸ. ಶಿವಾಜಿ ಮಹಾರಾಜರಿಗೆ ಬಸ್ರೂರಿನ ಜನರು ಬೆಂಬಲ ನೀಡಿದ್ದರಿಂದ ಬಸ್ರೂರು ಸ್ವತಂತ್ರವಾಗಲು ಸಾಧ್ಯವಾಗಿದೆ. ಶಿವಾಜಿ ಮಹಾರಾಜರ ರಾಜಮುದ್ರೆ ಮೋದಿಯವರ ಕಾಲದಲ್ಲಿ ನೌಕಾದಳದಲ್ಲಿ ಬಳಸಲಾಗುತ್ತಿದೆ. ಸಮಾಜದಲ್ಲಿ ಯಾರೂ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಎಲ್ಲರ ಮನೆಗೂ ನೀರು, ಶೌಚಗೃಹ, ವಿಮೆ, ಗ್ಯಾಸ್ ಸಂಪರ್ಕ, ಪಡಿತರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಶಿವಾಜಿ ಮಹಾರಾಜರ ಅಂತ್ಯೋದಯ ಕಾರ್ಯನೀತಿ ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು.

ಭಾರತೀಯ ಸಂತಸಭಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್‌ರಾಜ್ ಮಹದೇವರಾವ್ ಮಹಿಂದ್ ಪುಣೆ ಮಾತನಾಡಿದರು. ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ.ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಿದರು. ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಕಾರ್ಯದರ್ಶಿ ರಾಕೇಶ್ ಜಿ.ಕೆಳಮನೆ, ಗಂಗೊಳ್ಳಿ ವಲಯ ಪ್ರಮುಖ್ ಟಿ.ವಾಸುದೇವ ದೇವಾಡಿಗ, ಸಂಚಾಲಕ ಸುಧೀರ್ ಮೇರ್ಡಿ ಉಪಸ್ಥಿತರಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗ ಅಧ್ಯಕ್ಷ ಉಮೇಶ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಸಾರಿಕಾ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು. ಗಂಗೊಳ್ಳಿಯಿಂದ ದೋಣಿ ಮೂಲಕ ಸಾಗಿಬಂದ ಶೋಭಾಯಾತ್ರೆ ಬಸ್ರೂರು ಮಂಡಿಕೇರಿ ಹೊಳೆಬಾಗಿಲಿನಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನಡೆಯಿತು. ಬಸ್ರೂರಿನಲ್ಲಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆಗೆ ಸಹಕಾರ ನೀಡಲಾಗುವುದು. ಬಸ್ರೂರಿನಲ್ಲಿ ಅವರ ನೆನಪಿಗೆ ನೇವಲ್ ಅಕಾಡೆಮಿ ಅಥವಾ ಸ್ಮಾರಕ ನಿರ್ಮಾಣ ಮಾಡಲು ಮೋದಿ ಸರ್ಕಾರ ಸಿದ್ಧವಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಸ್ಥಳೀಯ ಜನಪ್ರತಿನಿಧಿಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕಿದೆ. ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್, ಗೋವಾ ಮುಖ್ಯಮಂತ್ರಿ