ಗಂಗನದೊಡ್ಡಿ ಗ್ರಾಮದ ಲೋಕನಾಥ್ ಅವರ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ವಿನಾಯಕ, ಭೀಮಶಿ, ಅಮ್ಜಾದ್‌ಖಾನ್ ಇತರರು ಇದ್ದರು.  
ಜಿಲ್ಲೆ

ಗಂಗನದೊಡ್ಡಿ, ರಾಮಾಪುರದಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

ಅಭಿನಯ್ ಎಚ್.ಎಂ

ಹನೂರು: ತಾಲೂಕಿನ ಬಸಪ್ಪನದೊಡ್ಡಿ ಭಾಗದಲ್ಲಿ ಚಿರತೆ ದಾಳಿ ಮುಂದುವರಿದಿದ್ದು,  ಗಂಗನದೊಡ್ಡಿ ಹಾಗೂ ರಾಮಾಪುರ ಗ್ರಾಮದಲ್ಲಿ 2 ಮೇಕೆಯನ್ನು ಬಲಿ ಪಡೆದಿದೆ.

ಈ ಭಾಗದಲ್ಲಿ ಐದಾರು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಆಗಾಗ್ಗೆ ಜಮೀನಿನ ಕೊಟ್ಟಿಗೆಗಳ ಮೇಲೆ ದಾಳಿ ನಡೆಸಿ ಮೇಕೆಗಳನ್ನು ಬಲಿ ಪಡಯುತ್ತಲೇ ಇದೆ. ಈವರೆಗೂ ಸುಮಾರು 50ಕ್ಕೂ ಹೆಚ್ಚು ಮೇಕೆಗಳನ್ನು ಬಲಿ ಪಡೆದಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಬೋನು ಇರಿಸಿದೆಯಾದರೂ ಚಾಲಾಕಿ ಚಿರತೆ ಬೋನಿಗೆ ಬೀಳುತ್ತಿಲ್ಲ.

ಸೋಮವಾರ ರಾತ್ರಿ 11ರ ವೇಳೆಯಲ್ಲಿ ಗಂಗನದೊಡ್ಡಿ ಗ್ರಾಮದ ಲೋಕನಾಥ್ ಅವರ ಜಮೀನಿನ ಕೊಟ್ಟಿಗೆಗೆ ಲಗ್ಗೆ ಇಟ್ಟ ಚಿರತೆ ಮೇಕೆ ಮೇಲೆ ದಾಳಿ ನಡೆಸಿದೆ. ಅಲ್ಲದೆ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಯಲ್ಲಿ ರಾಮಾಪುರದ ರವಿ ಅವರ ಜಮೀನಿನ ಕೊಟ್ಟಿಗೆಗೂ ಲಗ್ಗೆ ಇಟ್ಟು ಮೇಕೆಯನ್ನು ಕೊಂದು ಹಾಕಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಡಿಆರ್‌ಎಫ್ ವಿನಾಯಕ, ಗಸ್ತು ವನಪಾಲಕ ಭೀಮಶಿ ಆಗಮಿಸಿ ಪರಿಶೀಲನೆ ನಡೆಸಿದರು.